ಬೆಂಗಳೂರು : ನಟಿ ರುಕ್ಮಿಣಿ ಕಾರಿನಿಂದ ಡೈಮೆಂಡ್ ರಿಂಗ್ ಸೇರಿ ಒಟ್ಟು 23 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಕ್ಯಾಬ್ ಚಾಲಕ ಮಹಮ್ಮದ್ ಮಸ್ತಾನ್‌ನನ್ನು ಬಂಧಿಸಿ ಆತನಿಂದ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮೇ 11ರಂದು ಬೆಳಗ್ಗೆ ನಟಿ ರುಕ್ಮಿಣಿ ಅವರು ವಾಕಿಂಗ್‌ಗೆ ತೆರಳಿದ್ದ ವೇಳೆ ಈ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂ.18 ಬಳಿ ರುಕ್ಮಿಣಿ ತಮ್ಮ ಕಾರನ್ನು ನಿಲ್ಲಿಸಿದ್ದರು. ತಮ್ಮ ಕಾರಿನ ಒಳಗೆ ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್, ಪರ್ಸ್, ಎರಡು ಡೈಮಂಡ್ ರಿಂಗ್, ರೊಲೆಕ್ಸ್ ವಾಚ್ ಸೇರಿದಂತೆ ಹಲವಾರು ಅಮೂಲ್ಯ ವಸ್ತುಗಳನ್ನು ಇಟ್ಟುಹೋಗಿದ್ದರು. ಆದರೆ, ಅವರು ವಾಕಿಂಗ್ ಹೋಗುವಾಗ ತಮ್ಮ ಕಾರನ್ನು ಲಾಕ್ ಮಾಡುವುದನ್ನು ಮರೆತುಬಿಟ್ಟಿದ್ದರು. ಇದನ್ನು ಗಮನಿಸಿದ್ದ ಕ್ಯಾಬ್ ಚಾಲಕ ಮಹಮ್ಮದ್ ಮಸ್ತಾನ್ ಕಾರಿನೊಳಗಿನ ವಸ್ತುಗಳನ್ನು ಕದ್ದು ಪರಾರಿ ಆಗಿದ್ದನು.
ನಂತರ ನಟಿ ರುಕ್ಮಿಣಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಸಿಸಿಟಿವಿ ಹಾಗೂ ಇತರೆ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಪತ್ತೆ ಮಾಡಿ, ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಂದೂವರೆ ಲಕ್ಷದ ಬ್ಯಾಗ್, 75 ಸಾವಿರ ಮೌಲ್ಯದ ಪರ್ಸ್, 10 ಲಕ್ಷ ಮೌಲ್ಯದ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್, 9 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್, 3 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಸೇರಿ ಒಟ್ಟು 23 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಟಿ ರುಕ್ಮಿಣಿ ಕನ್ನಡದ ಭಜರಂಗಿ, ತಮಿಳಿನ ಕೊಚಾಡಿಯನ್, ಕಾಟ್ರು ವೆಳಿಯಿಡೈ ಸೇರಿದಂತೆ ಹಿಂದಿಯ ಶಮಿತಾಭ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ : ಡಾ.ಶಿವರಾಮ ಕಾರಂತ ಬಳಿಕ ಬೆಂಗಳೂರಲ್ಲಿ ಮತ್ತೊಂದು ಲೇಔಟ್ – 2 ಸಾವಿರ ಎಕರೆಯಲ್ಲಿ ಬಡಾವಣೆ.. BDA ಕಮಿಷನರ್ ತರಾತುರಿಯಲ್ಲಿ ಸಹಿ ಮಾಡಿದ್ದೇಕೆ?
