ಬೆಂಗಳೂರು : ಡಾ.ಶಿವರಾಮ ಕಾರಂತ ಲೇಔಟ್ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಲೇಔಟ್ ನಿರ್ಮಾಣ ಮಾಡಲು ಬಿಡಿಎ ತಯಾರಿ ನಡೆಸಿಕೊಂಡಿದೆ. ಈ ಮೂಲಕ ಬಿಡಿಎ ಲೇಔಟ್ ನಿರ್ಮಾಣ ಮಾಡುತ್ತಿರುವುದು ಬೆಂಗಳೂರಿನ ಅಭಿವೃದ್ದಿಗೋ ಅಥವಾ ಲೂಟಿಗೋ ಎಂಬ ಚರ್ಚೆಗಳು ಶುರುವಾಗಿದೆ.
ಹೌದು.. ಈಗಾಗಲೇ ಡಾ. ಶಿವರಾಮ ಕಾರಂತ ಲೇಔಟ್ ನಿರ್ಮಾಣ ಮಾಡಿರುವ ಬಿಡಿಎ, ಇದೀಗ ಮತ್ತೊಂದು ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಂಡಿದೆ. ಮುಂದುವರಿದ ಕಾರಂತ ಬಡಾವಣೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಬಿಡಿಎ ಕಮಿಷನರ್ ಎನ್. ಜಯರಾಮ್ ಅವರು, ಒಟ್ಟು 12 ಗ್ರಾಮಗಳ ಜಮೀನಿನ ಖಾತೆದಾರರ ವಿವಿರ, ವಿಸ್ತೀರ್ಣ, ನಕ್ಷೆ, ಚಕ್ಕುಬಂದಿ ನೀಡುವಂತೆ ಭೂಸ್ವಾಧೀನಾಧಿಕಾರಿ ಕೃಪಾಲಿನಿ, ನಿಖಿತ, ನಂದಿನಿ, ಹರೀಶ್ ನಾಯ್ಗೆ ಸೂಚನೆ ಕೊಟ್ಟಿದ್ದಾರೆ.
ಈಗಾಗಲೇ 17 ಗ್ರಾಮಗಳಲ್ಲಿ 3565 ಎಕರೆ ಜಾಗದಲ್ಲಿ ಡಾ. ಶಿವರಾಮ್ ಕಾರಂತ ಬಡಾವಣೆ ನಿರ್ಮಾಣವಾಗಿದೆ. ಕಾರಂತ ಲೇಔಟ್ನಿಂದ ಸಾರ್ವಜನಿಕರಿಗೆ ಒಂದೇ ಒಂದು ಸೈಟ್ ಹಂಚಿಕೆಯಾಗಿಲ್ಲ. ಈ ನಡುವೆ ಬಿಡಿಎ ಮುಂದುವರಿದ ಭಾಗವವಾಗಿ ಮತ್ತೊಂದು ಶಿವರಾಮ ಕಾರಂತ ಲೇಔಟ್ ಜಪ ಮಾಡುತ್ತಿದೆ. ಯಲಹಂಕದ ಸುತ್ತಮುತ್ತಲಿನ ಕೊಂಡಶೆಟ್ಟಿಹಳ್ಳಿ, ಲಿಂಗರಾಜಸಾಗರ, ಸೋಲದೇವನಹಳ್ಳಿ, ಚಿಕ್ಕವಾಣ ಸುತ್ತಮುತ್ತ ಭೂಸ್ವಾದೀನ ಮಾಡಲಾಗಿದ್ದು, ನಿವೃತ್ತಿ ಹೊತ್ತಲ್ಲಿಯೇ ಪಾರ್ಟ್-2 ಕಾರಂತ ಲೇಔಟ್ಗೆ BDA ಕಮಿಷನರ್ ಎನ್. ಜಯರಾಮ್ ಅವರು ಪ್ರಾಥಮಿಕ ಅಧಿಸೂಚನೆಯ ಸುತ್ತೋಲೆ ಹೊರಡಿಸಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿಯೂ ಬಿಡಿಎ ಹೊಸ ಲೇಔಟ್ ಮಾಡುವ ಫ್ಲಾನ್ ಮಾಡಿದ್ದು, ಸುಮಾರು 2000 ಎಕರೆ ಜಾಗದಲ್ಲಿ ಬಿಡಿಎ ಮತ್ತೊಂದು ಲೇಔಟ್ ನಿರ್ಮಾಣ ಮಾಡಲಿದೆ. ಯಲಹಂಕ ಸುತ್ತಮುತ್ತಲಿನ ರೈತರ ಭೂಮಿ ಮೇಲೆ ಬಿಡಿಎ ಮತ್ತೆ ಕಣ್ಣಿಟ್ಟಿದ್ದು, ಹೊಸ ಬಡಾವಣೆಗೂ ಶಿವರಾಮ ಕಾರಂತ ಬಡಾವಣೆಯೆಂದೇ ಹೆಸರಿಡಲು ಚಿಂತನೆ ಮಾಡಿಕೊಂಡಿದೆ.
ಈ ಬೆನ್ನಲ್ಲೇ ಇದು ಬಡವರಿಗೆ ಸೂರು ಕಲ್ಪಿಸುವ ತಂತ್ರವೋ ಅಥವಾ ಲೂಟಿ ಪ್ಲಾನೋ ಅನ್ನೋ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಬಿಡಿಎ ಈಗಾಗಲೇ ನಿರ್ಮಾಣ ಮಾಡಿರೊ ಲೇಔಟ್ಗಳಿಗೆ ಇಲ್ಲಿಯವರೆಗೆ ಮೂಲಸೌಕರ್ಯಗಳನ್ನೇ ಸರಿಯಾಗಿ ನೀಡಿಲ್ಲ. ಇದೀಗ ನಿರ್ಮಾಣ ಮಾಡುತ್ತಿರುವ ಹೊಸ ಲೇಔಟ್ ಯಾವ ಪುರುಷಾರ್ಥಕ್ಕೆ? ಎಂಬ ಆಕ್ರೋಶದ ಕೂಗು ಸಹ ಕೇಳಿಬಂದಿದೆ.
ಅರ್ಕಾವತಿಯಲ್ಲಿ ಸೈಟ್ ಪಡೆದು ಎರಡು ದಶಕದಿಂದ ಬಿಡಿಎಗೆ ಜನ ಅಲೆಯುತ್ತಿದ್ದಾರೆ. ಇದೀಗ ಹೊಸ ಲೇಔಟ್ ನಿರ್ಮಾಣ ಬೇಕಾ ಬಿಡಿಎ ಅಧ್ಯಕ್ಷರೇ? ಹಳೇ ಲೇಔಟ್ಗಳಲ್ಲಿ ಕೋಟಿ ಕೋಟಿ ಸುರಿದ್ರೂ ಮೂಲಸೌಕರ್ಯ ಇನ್ನೂ ನೀಡಿಲ್ಲ. ಇದೀಗ ಯಲಹಂಕ ಸಮೀಪದ ಶಿವರಾಮ ಕಾರಂತ ಬಡಾವಣೆ ಹತ್ತಿರವಿರುವ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಬ್ಲೂಪ್ರಿಂಟ್ ಸಿದ್ದತೆ ಮಾಡಿಕೊಳ್ಳಲಾಗಿದೆ.
ಶಿವರಾಮ ಕಾರಂತ ಬಡಾವಣೆ ಮಾಡಿ ಅಂತ ನಾಲ್ಕು ವರ್ಷದ ಹಿಂದೆಯೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆದ್ರೆ, ಕಾರಂತ ಲೇಔಟ್ನಲ್ಲಿ ಬಡವರಿಗೆ ಒಂದೇ ಸೈಟ್ ವಿತರಣೆ ಇಲ್ಲ. ಇದೀಗ ಶಿವರಾಮ್ ಕಾರಂತ ಬಡಾವಣೆಯ ಮತ್ತೊಂದು ಹೊಸ ಲೇಔಟ್ ನಿರ್ಮಾಣ ಹೆಸರಿನಲ್ಲಿ BDA ಲೂಟಿಗೆ ಪ್ಲಾನ್ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಬಿಡಿಎಯಿಂದ ಈವರೆಗೂ ಮಹಾನಗರದ ನಾನಾ ಭಾಗಗಳಲ್ಲಿ 67 ಬಡಾವಣೆಗಳ ನಿರ್ಮಾಣ ಮಾಡಲಾಗಿದೆ. ಸುಮಾರು 1.35 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಿರೋ ಪ್ರಾಧಿಕಾರ, ಹಾಕಿದ ಬಂಡವಾಳಕ್ಕೆ ಅಸಲು ಕೂಡ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. 2003ರಿಂದ ಹೊಸ ಬಡಾವಣೆ ಮಾಡಿರಲಿಲ್ಲ.
ಹೊಸ ಭೂಸ್ವಾಧೀನ ಕಾಯ್ದೆ ಅಡಿ ರೈತರಿಗೆ ನಾಲ್ಕು ಪಟ್ಟು ಪರಿಹಾರ ನೀಡಬೇಕಿದೆ. ಜೊತೆಗೆ ರೈತರು ಹೆಚ್ಚಿನ ಪರಿಹಾರಕ್ಕೆ ಪಟ್ಟು ಹಿಡಿದಿರೋದು ಬಿಡಿಎಗೆ ಬಡಾವಣೆ ರಚನೆ ಮಾಡೋದು ದೊಡ್ಡ ಸವಾಲಾಗಿದೆ. ಇದೆಲ್ಲದ್ರ ನಡುವೆ ಹೊಸ ಬಡಾವಣೆ ರಚನೆಗೆ ಬಿಡಿಎ ಮುಂದಾಗಿದೆ. ಹಾಗಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಸೂರು ಹೆಸ್ರಲ್ಲಿ ಬಿಡಿಎ ಲೂಟಿಗೆ ಮುಂದಾಗ್ತಿದೆಯಾ ಎಂಬ ಚರ್ಚೆಗಳು ನಡೆಯುತ್ತಿದೆ.
ಯಾವೆಲ್ಲಾ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ :
-ಕೊಂಡಶೆಟ್ಟಿಹಳ್ಳಿ
-ಲಿಂಗರಾಜಸಾಗರ
-ಸೋಲದೇವನಹಳ್ಳಿ
-ಕೆಂಪಾಪುರ
-ಕಸಘಟ್ಟಪುರ
-ಕುಂಬಾರಹಳ್ಳಿ.
-ಆವಲಹಳ್ಳಿ.
-ಮಾವಳ್ಳಿಪುರ..
-ಜೆಬಿ ಕಾವಲ್,
-ಲಿಂಗರಾಜಪುರ.
-ಮೈಲಪ್ಪನಹಳ್ಳಿ
-ದೊಡ್ಡಬ್ಯಾಲಕೆರೆ
ಇದನ್ನೂ ಓದಿ : ಮಿಡ್ನೈಟ್ ಗೋಡೆ ಕೊರೆದು ಬೆತ್ತಲಾಗಿ ಮೊಬೈಲ್ ಅಂಗಡಿಗೆ ಎಂಟ್ರಿ – 85 ಫೋನ್ ದೋಚಿದ್ದ ಖತರ್ನಾಕ್ ಕಳ್ಳ ಅರೆಸ್ಟ್!
