ಬೆಂಗಳೂರು: ಮೊಬೈಲ್ ಅಂಗಡಿಯ ಹಿಂಬದಿ ಗೋಡೆ ಕೊರೆದು ಬೆತ್ತಲೆಯಾಗಿಯೇ ಒಳನುಗ್ಗಿ, ವಿವಿಧ ಕಂಪೆನಿಗಳ 85 ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿಯ ಹೊಂಗಸಂದ್ರ ಬಳಿಯ ದಿನೇಶ್ ಎಂಬವರಿಗೆ ಸೇರಿದ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್‌ನಲ್ಲಿ ಮೇ 9ರ ಮಧ್ಯರಾತ್ರಿ ಕಳ್ಳತನವಾಗಿತ್ತು. ಈ ಸಂಬಂಧ ದೂರು ನೀಡಿದ ಮೇರೆಗೆ ಅಸ್ಸಾಂನ ಇಕ್ರಂ ಮುಲ್ಲಾ ಖಾನ್ ಎಂಬವನನ್ನು ಬಂಧಿಸಿ, ಸದ್ಯ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತನಿಂದ 60ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿ ಅರೆಕೆರೆಯಲ್ಲಿ ನೆಲೆಸಿದ್ದ. ಆರಂಭದಲ್ಲಿ ಸೆಂಟ್ರಲ್ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕೆಲಸ ತೊರೆದು ಡಾಮಿನೋಸ್ ಶಾಪ್ವೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಹೆಚ್ಚು ಹಣ ಸಂಪಾದನೆಗಾಗಿ ಕಳ್ಳತನದ ಹಾದಿ ತುಳಿದು ಹೊಂಗಸಂದ್ರದಲ್ಲಿರುವ ಮೊಬೈಲ್ ಶಾಪ್‌ನಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ.
ಅಂಗಡಿ ಮಾಲೀಕ ದಿನೇಶ್ ಮೇ 9ರಂದು ಎಂದಿನಂತೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಪೂರ್ವ ಸಂಚಿನಂತೆ ಅಂದು ಮಧ್ಯರಾತ್ರಿ ಬಂದ ಕಳ್ಳ ಅಂಗಡಿ ಹಿಂಬದಿಯ ಗೋಡೆಯನ್ನು ಕಿಂಡಿ ರೀತಿ ಕೊರೆದಿದ್ದಾನೆ. ನಂತರ ಬಟ್ಟೆಗಳನ್ನು ಕಳಚಿಟ್ಟು ಬೆತ್ತಲೆಯಾಗಿ ಒಳನುಗ್ಗಿದ್ದಾನೆ. ಮುಖ ಚಹರೆ ಗೊತ್ತಾಗದಿರಲು ಮುಖಕ್ಕೆ ಮಾಸ್ಕ್ ಹಾಕಿದ್ದ. ಅಂಗಡಿಯಲ್ಲಿದ್ದ ವಿವಿಧ ಕಂಪನಿಗಳ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ಗಳನ್ನು ಕೆಲವೇ ನಿಮಿಷಗಳಲ್ಲಿ ದೋಚಿ ಅಲ್ಲಿಂದ ಪರಾರಿಯಾಗಿದ್ದ. ಕಳ್ಳತನಕ್ಕಾಗಿ ಗೋಡೆ ಕೊರೆದ ಆರೋಪಿ ಬಟ್ಟೆ ಧರಿಸಿ ಒಳಹೋದರೆ ಬಟ್ಟೆ ಹರಿದು ಹೋಗುತ್ತದೆ ಎಂದು ಭಾವಿಸಿ ನಗ್ನವಾಗಿಯೇ ಒಳನುಗ್ಗಿದ್ದಾನೆ. ಈ ಬಗ್ಗೆ ಆತನೇ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಮಹಿಳೆಗೆ ಚಾಕು ಇರಿತ – ಆರೋಪಿ ಅರೆಸ್ಟ್!
