ಪಾಕ್​ ಬೆಂಬಲಿಸಿದ ಟರ್ಕಿಗೆ ಭಾರತ ಭರ್ಜರಿ ಹೊಡೆತ – ದೇಶದ ವಿಮಾನ ನಿಲ್ದಾಣಗಳಿಂದ ‘ಸೆಲೆಬಿ’ ಕಂಪನಿ ಕಿಕ್​ಔಟ್!

ನವದೆಹಲಿ : ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ನೆರವು ನೀಡಿದ್ದ ಟರ್ಕಿ ವಿರುದ್ಧ ನಡೆಸಲಾಗುತ್ತಿರುವ ಅಭಿಯಾನ ಜೋರಾಗುತ್ತಿದೆ. ಒಂದು ಕಡೆಯಲ್ಲಿ ಜನರು ಸಾಮಾಜಿಕ ಜಾಲತಾಣಗಳಲ್ಲಿ Boycott Turkey ಕರೆ ನೀಡುತ್ತಿದ್ದರೆ, ಇನ್ನೊಂದು ಕಡೆ ಕೇಂದ್ರ ಸರ್ಕಾರವೇ ಟರ್ಕಿಗೆ ಶಾಕ್‌ ನೀಡಿದೆ.

ದೇಶದ 9 ವಿಮಾನ ನಿಲ್ದಾಣಗಳಲ್ಲಿ ಪ್ರಾಥಮಿಕ ಹಂತದ ಸೇವೆಗಳನ್ನು ನೀಡುತ್ತಿದ್ದ ಟರ್ಕಿಯ ಸೆಲೆಬಿ ಏವಿಯೇಷನ್ ಕಂಪನಿಗೆ ನೀಡಲಾಗಿದ್ದ ಸೇವಾ ಲೈಸನ್ಸ್ ಗಳನ್ನು ಭಾರತೀಯ ನಾಗರಿಕ ವಿಮಾನಯಾನ ಸುರಕ್ಷಾ ಬ್ಯೂರೋ (ಬಿಸಿಸಿಎಸ್) ರದ್ದು ಮಾಡಿದೆ. ರಾಷ್ಟ್ರೀಯ ಭದ್ರತಾ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್‌, ಕೊಚ್ಚಿನ್‌, ಕಣ್ಣೂರು, ಚೆನ್ನೈ, ಗೋವಾ ಸೇರಿ ದೇಶದ 9 ಏರ್​​ಪೋರ್ಟ್​ಗಳಲ್ಲಿ ಈ ಕಂಪನಿ ಪ್ರಾಥಮಿಕ ಸೇವೆ ನೀಡುತ್ತಿತ್ತು. ಸದ್ಯವೇ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಸೇವೆಗಳನ್ನು ನೀಡುವ ಗುತ್ತಿಗೆಯ ಆ ಕಂಪನಿ ಪಡೆಯಲು ಸಿದ್ಧತೆ ನಡೆಸಿತ್ತು. ಅಷ್ಟರಲ್ಲೇ ಭಾರತ ಸರ್ಕಾರ ಸೆಲೆಬಿಗೆ ನೀಡಲಾಗಿದ್ದ ಸೇವಾ ಲೈಸೆನ್ಸ್‌ ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

ಸೆಲೆಬಿ ಏವಿಯೇಷನ್ ​​ಎರಡು ಪ್ರತ್ಯೇಕ ಘಟಕಗಳನ್ನು ಹೊಂದಿದೆ. ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ವಿಮಾನ ನಿಲ್ದಾಣ ನಿರ್ವಹಣೆ ಕಾರ್ಯಾಚರಣೆ ನಡೆಸುತ್ತಿದ್ದರೆ ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸೇವೆಗಳನ್ನು ಮೇಲ್ವಿಚಾರಣೆ ಮಾಡುತ್ತಿತ್ತು.

ಸೆಲೆಬಿ 2008ರಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಂಟಿ ಉದ್ಯಮದ ಮೂಲಕ ಭಾರತವನ್ನು ಪ್ರವೇಶಿಸಿತು. ಸೆಲೆಬಿ ಕಂಪನಿಗೆ ಕೆಲಸ ನಿರ್ವಹಿಸಲು ಯುಪಿಎ ಸರ್ಕಾರ ಅನುಮತಿ ನೀಡಿತ್ತು. ಮುಂಬೈ ದಾಳಿಯಾದ ನಂತರ ಬಾಳಾಸಾಹೇಬ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆಗೆ ಸಂಯೋಜಿತವಾಗಿರುವ ಅನೇಕ ವಾಯುಯಾನ ಕಾರ್ಮಿಕ ಸಂಘಗಳು, ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಸೆಲೆಬಿಗೆ ಅನುಮತಿ ನೀಡಿದ್ದನ್ನು ಭಾರೀ ವಿರೋಧಿಸಿದ್ದವು.

ಇದನ್ನೂ ಓದಿ : ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಭರ್ಜರಿ ಗುಡ್​ನ್ಯೂಸ್ – ರಾಜ್ಯ ಸರ್ಕಾರದಿಂದ ಗೌರವಧನ ಹೆಚ್ಚಳ!

Btv Kannada
Author: Btv Kannada

Read More