ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಬೃಹತ್ ಹಡಗು ಮುಳುಗಡೆ – ಆರು ಮಂದಿಯ ರಕ್ಷಣೆ!

ಮಂಗಳೂರು : ಮಂಗಳೂರು ನಗರದಿಂದ ಲಕ್ಷದ್ವೀಪಕ್ಕೆ ಸರಕು ಹಾಗೂ ಆಹಾರ ಸಾಮಗ್ರಿ ಸಾಗಾಟ ಮಾಡುತ್ತಿದ್ದ ಬೃಹತ್ ಹಡಗೊಂದು ಸಮುದ್ರ ತೀರದಿಂದ ಸುಮಾರು 60 ನಾಟಿಕಲ್‌ ಮೈಲ್ ದೂರದಲ್ಲಿ ಸಮುದ್ರದ ಮಧ್ಯೆ ಮುಳುಗಡೆಯಾಗಿದೆ. ಅದೃಷ್ಟವಶಾತ್‌ ಈ ಹಡಗಿನಲ್ಲಿದ್ದ 6 ಮಂದಿ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳೂರು ಹಳೆ ಬಂದರಿನಿಂದ ಎಂಎಸ್‌ವಿ ಸಲಾಮತ್‌ 3ಎಂಬ ಹಡಗು ಸೋಮವಾರ (ಮೇ 12ರಂದು) ಎಂ ಸ್ಯಾಂಡ್‌, ಜಲ್ಲಿ, ಸಿಮೆಂಟ್‌ ಹಾಗೂ ಆಹಾರ ಉತ್ಪನ್ನಗಳನ್ನು ಹೇರಿಕೊಂಡು ಲಕ್ಷದ್ವೀಪಕ್ಕೆ ಹೊರಟಿತ್ತು. ಈ ಮಿನಿ ಸರಕು ಸಾಗಾಟದ ಹಡಗು ಮೇ 18ರಂದು ಲಕ್ಷದ್ವೀಪದ ಕಡಮತ್‌ ದ್ವೀಪಕ್ಕೆ ತಲುಪಬೇಕಿತ್ತು.

ಆದ್ರೆ ಬುಧವಾರ ಮಧ್ಯಾಹ್ನ 12ರ ವೇಳೆಗೆ ಸಮುದ್ರದ ಮಧ್ಯೆ ಭಾರಿ ಗಾಳಿ, ಮಳೆ ಬೀಸಲಾರಂಭಿಸಿದ್ದರಿಂದ ಹಡಗು ಅಪಾಯಕ್ಕೆ ಸಿಲುಕಿತು. ಇದಾದ ಕೆಲವೇ ಹೊತ್ತಿನಲ್ಲಿ ಹಡಗು ಸಮುದ್ರದಲ್ಲಿ ಮುಳುಗಿಯೇ ಹೋಯಿತು. ಈ ಸಂದರ್ಭ ಹಡಗಿನಲ್ಲಿದ್ದ 6 ಮಂದಿ (ಇವರಲ್ಲಿ ಇಬ್ಬರು ಮಂಗಳೂರಿನವರು ಮತ್ತು 4 ಮಂದಿ ಗುಜರಾತಿನವರು) ಸಮುದ್ರಕ್ಕೆ ಹಾರಿ ಡಿಂಗಿ ಬೋಟಿನ ಸಹಾಯದಿಂದ ಪ್ರಾಣ ಉಳಿಸಿಕೊಂಡಿದ್ದಾರೆ.
ಹಡಗಿನಲ್ಲಿದ್ದ ಸಿಬ್ಬಂದಿಗಳಾದ ಇಸ್ಮಾಯಿಲ್‌ ಶರೀಫ್‌, ಅಲೆಮನ್‌ ಅಹ್ಮದ್‌ ಬಾಯ್‌ ಗಾವ್ಡ, ಕಾಕಲ್‌ ಸುಲೇಮಾನ್‌ ಇಸ್ಮಾಯಿಲ್‌, ಅಕ್ಬರ್‌ ಅಬ್ದುಲ್‌ ಸುರಾನಿ, ಕಸಂ ಇಸ್ಮಾಯಿಲ್‌ ಮತ್ತು ಅಜ್ಮಲ್‌ ಅವಘಡದಿಂದ ಪಾರಾದವರು.

7ಹಡಗು ಮುಳುಗಿರುವ ಬಗ್ಗೆ ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ಬಂದಿದ್ದು, ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಗಸ್ತು ತಿರುಗುತ್ತಿದ್ದ ಕೋಸ್ಟ್‌ ಗಾರ್ಡ್‌ನ ‘ವಿಕ್ರಂ’ ಶಿಪ್‌ನಲ್ಲಿ ರಕ್ಷಣಾ ಕಾರ್ಯ ನಡೆಸಿದ್ದು, 6 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಲಾದ ಎಲ್ಲಾ 6 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ.

ಇದನ್ನೂ ಓದಿ : ಟಿವಿಗಿಂತ ಮೊದಲು Zee5 ನಲ್ಲಿ ‘ಸರಿಗಮಪ ಫಿನಾಲೆ’ ನೇರಪ್ರಸಾರ!

Btv Kannada
Author: Btv Kannada

Read More