ಚಲಿಸುತ್ತಿದ್ದ ಸ್ಲೀಪರ್‌ ಬಸ್​ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ – ಇಬ್ಬರು ಮಕ್ಕಳು ಸೇರಿ ಐವರು ಸಜೀವ ದಹನ!

ಲಕ್ನೋ : ಉತ್ತರ ಪ್ರದೇಶದ ರಾಜಧಾನಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಸ್ಪೀಪರ್‌ ಬಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಲಕ್ನೋದ ಮೋಹನ್ ಲಾಲ್ ಗಂಜ್ ಪ್ರದೇಶದ ಕಿಸಾನ್ ಪಥದಲ್ಲಿ ಘಟನೆ ನಡೆದಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 60 ಪ್ರಯಾಣಿಕರ ಪೈಕಿ ಐವರು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಖಾಸಗಿ ಸ್ಲೀಪರ್‌ ಬಸ್‌ ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿತ್ತು. ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಏಕಾಏಕಿ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ತಕ್ಷಣಕ್ಕೆ ಪ್ರಯಾಣಿಕರಿಗೆ ಗಮನಕ್ಕೆ ಬಂದಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಹೊಗೆ ತುಂಬಿಕೊಂಡು ಉಸಿರುಗಟ್ಟಿದ ಅನುಭವವಾಗಿದೆ. ಬಳಿಕ ಒಂದಿಬ್ಬರು ಪ್ರಯಾಣಿಕರು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಆತಂಕಗೊಂಡ ಪ್ರಯಾಣಿಕರು ಕಿಟಕಿ ಗಾಜು ಹೊಡೆದು ಎಸ್ಕೇಪ್‌ ಆಗಲು ಪ್ರಯತ್ನಿಸಿದ್ದಾರೆ.

ಬಸ್​ಗೆ ಬೆಂಕಿ ಹೊತ್ತಿಕೊಂಡಿರುವುದು ನೋಡ್ತಿದ್ದಂತೆ ಸುತ್ತಮುತ್ತಲಿನ ಜನ ನೆರವಿಗೆ ಧಾವಿಸಿದ್ದಾರೆ. ಜೊತೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಬಂದ ರಕ್ಷಣಾ ತಂಡ ಅಗ್ನಿ ನಂದಿಸಲು ಹರಸಾಹಸಪಟ್ಟಿತು. ಅಷ್ಟೊತ್ತಿಗೆ ಇಡೀ ಬಸ್ ಸುಟ್ಟು ಹೋಗಿತ್ತು. ಈ ಅಪಘಾತದಲ್ಲಿ 5 ಪ್ರಯಾಣಿಕರು ಸಜೀವ ದಹನವಾಗಿದ್ದು, ಅವರನ್ನು ಇನ್ನೂ ಗುರುತಿಸಲಾಗಿಲ್ಲ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ ಚಾಲಕ ಮೊದಲು ಗಾಜು ಒಡೆದು ಬಸ್ಸಿನಿಂದ ಜಿಗಿದು ಪರಾರಿಯಾಗಿದ್ದಾನೆ. ಅಪಘಾತದ ಬಳಿಕ ಕಾಣೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಇತಿಹಾಸದ ಪುಟ ಸೇರಿದ BBMP – ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ‘ಗ್ರೇಟರ್ ಬೆಂಗಳೂರು’ ಉದಯ!

Btv Kannada
Author: Btv Kannada

Read More