ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 7 ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ನಿದ್ದೆಮಂಪರಿನಲ್ಲಿದ್ದ ಅಧಿಕಾರಿಗಳು ಕಣ್ಣು ಬಿಡುವ ಹೊತ್ತಿಗೆ ‘ಲೋಕಾ’ ಅಧಿಕಾರಿಗಳು ಅವರ ಮನೆ ಮುಂದೆ ಮತ್ತು ಕಚೇರಿ ಮುಂದೆ ಹೋಗಿ ನಿಂತಿದ್ದಾರೆ. ಬೆಂಗಳೂರು, ತುಮಕೂರು, ಮಂಗಳೂರು, ವಿಜಯಪುರ, ಯಾದಗಿರಿ, ಕಲಬುರ್ಗಿ ಸೇರಿದಂತೆ ರಾಜ್ಯಾದ್ಯಂತ 40 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಲೋಕಾ ಅಧಿಕಾರಿಗಳು ಸರ್ಚಿಂಗ್ ಶುರು ಮಾಡಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಲ್ಲಿ 12, ಬೆಂಗಳೂರು ಗ್ರಾಮಾಂತರದಲ್ಲಿ 8, ತುಮಕೂರಲ್ಲಿ 7, ಯಾದಗಿರಿಯಲ್ಲಿ 5, ಮಂಗಳೂರಲ್ಲಿ 4, ವಿಜಯಪುರದ 4 ಕಡೆ ದಾಳಿ ಮಾಲಾಗಿದೆ.
ಯಾವೆಲ್ಲಾ ಅಧಿಕಾರಿಗಳಿಗೆ ‘ಲೋಕಾ’ ಶಾಕ್?
BDA ಟೌನ್ ಪ್ಲ್ಯಾನಿಂಗ್ ಅಡಿಷನಲ್ ಡೈರೆಕ್ಟರ್ ಮನೆ ಮೇಲೆ ರೇಡ್ : ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ BDA ಟೌನ್ ಪ್ಲ್ಯಾನಿಂಗ್ ಅಡಿಷನಲ್ ಡೈರೆಕ್ಟರ್ ಆಗಿರುವ ಮುರಳಿ ಟಿವಿ ನಿವಾಸದ ಮೇಲೆ ಲೋಕಾ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರೇಡ್ ಮಾಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿ ಮುರಳಿ ಟಿವಿ ನಿವಾಸದ ಮೇಲೆ 2 ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು, ಬೆಳಗ್ಗೆಯಿಂದಲೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಡಿಸೆಂಬರ್ನಲ್ಲಿ BDA ಡಿಡಿ ಆಗಿ ಅಧಿಕಾರ ವಹಿಸಿಕೊಂಡಿದ್ದ ಮುರುಳಿ, ನಗರ ಯೋಜನೆ ಇಲಾಖೆಯಲ್ಲೇ ಹಲವು ವರ್ಷ ಕೆಲಸ ಮಾಡಿದ್ದರು. ಎಂಎಸ್ ಬಿಲ್ಡಿಂಗ್ ಕಚೇರಿಯಲ್ಲೇ ಕಾಲ ಕಳೆದಿದ್ದ ಮುರುಳಿ, ಲಾಬಿ ಮಾಡಿ ಬಿಡಿಎಗೆ ಡೆಪ್ಯುಟೇಷನ್ ಮೇಲೆ ಬಂದಿದ್ದರು.
ನಾರಾಯಣಗೌಡ ನಿವೃತ್ತಿಯಾಗುತ್ತಿದ್ದಂತೆ ವಕ್ಕರಿಸಿದ್ದ ಮುರುಳಿ, ಎಂಎಸ್ ಬಿಲ್ಡಿಂಗ್ನಲ್ಲಿ ಕೆಲಸ ಮಾಡುವಾಗಲೇ ಸಾಕಷ್ಟು ಆರೋಪಗಳನ್ನು ಹೊತ್ತುಕೊಂಡಿದ್ದರು. ಮುರುಳಿ ಮೇಲೆ ಸಾಕಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ಎಂಬ ಆರೋಪವಿದ್ದು, ಬಿಡಿಎಗೆ ಬಂದ ಮೇಲೂ ನಕ್ಷೆ ಮಂಜೂರಾತಿ, ನಿರಪೇಕ್ಷಣಾ ಪತ್ರ ನೀಡಲು ಲಂಚ ಪಡೆಯುತ್ತಿದ್ದ ಆಪಾದನೆ ಕೇಳಿಬಂದಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಈ ಸಂಬಂಧ ಇಂದು ಏಕಾಏಕಿ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಮುರಳಿಗೆ ಶಾಕ್ ಕೊಟ್ಟಿದ್ದಾರೆ.


ತುಮಕೂರಿನ ನಿರ್ಮಿತಿ ಕೇಂದ್ರದ ನಿರ್ದೇಶಕನಿಗೂ ಲೋಕಾ ಶಾಕ್ : ಬೆಳ್ಳಂಬೆಳಗ್ಗೆ ತುಮಕೂರಿನ ನಿರ್ಮಿತಿ ಕೇಂದ್ರ ಎಮ್.ಡಿ ರಾಜಶೇಖರ ಮನೆ ಮೇಲೆ ಲೋಕಾ ಎಸ್ಪಿ ಲಕ್ಷ್ಮೀ ನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ತುಮಕೂರಿನ ಸಪ್ತಗಿರಿ ಬಡಾವಣೆ, ಎಸ್.ಎಸ್ ಪುರಂನಲ್ಲಿ ಇರುವ ರಾಜಶೇಖರ ಸಹೋದರನ ಮನೆ ಮೇಲೆ ರೇಡ್ ನಡೆಸಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆ ಏಕಕಾಲಕ್ಕೆ 15 ಮಂದಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.





ಮಂಗಳೂರಿನಲ್ಲಿ ಸರ್ವೆ ಇಲಾಖೆ ಅಧಿಕಾರಿ ಮಂಜುನಾಥ್ ಮನೆ ಮೇಲೆ ದಾಳಿ : ಮಂಗಳೂರಿನಲ್ಲಿ ಸರ್ವೆ ಇಲಾಖೆ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಸರ್ವೆ ಅಧಿಕಾರಿ ಮಂಜುನಾಥ್ ಮನೆ ಮೇಲೆ ದಾಳಿ ನಡೆಸಿದ್ದು, ಕಳೆದ ಒಂದು ಗಂಟೆಯಿಂದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರಿನ ಬಿಜೈನ 8ನೇ ಕ್ರಾಸ್ನಲ್ಲಿರುವ ಸರ್ವೆ ಅಧಿಕಾರಿ ಮಂಜುನಾಥ್ ಮನೆಗೆ ಒಟ್ಟು ಮೂರು ಕಾರುಗಳಲ್ಲಿ ಬಂದ ಲೋಕಾ ಟೀಂ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ತುಮಕೂರು ಮೂಲದ ಮಂಜುನಾಥ್ ಸದ್ಯ ಸರ್ವೆ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಕರ್ತವ್ಯಹಿಸುತ್ತಿದ್ದಾರೆ.




ಇದನ್ನೂ ಓದಿ : ಇತಿಹಾಸದ ಪುಟ ಸೇರಿದ BBMP – ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ‘ಗ್ರೇಟರ್ ಬೆಂಗಳೂರು’ ಉದಯ!
