ಕೆಲಸ ಮಾಡ್ತಿದ್ದ ಬ್ಯಾಂಕಲ್ಲಿ ಚಿನ್ನ ಕದ್ದ ಅಧಿಕಾರಿ ಪೊಲೀಸರ ಬಲೆಗೆ – 3 ಕೆ.ಜಿ 643 ಗ್ರಾಂ ಚಿನ್ನಾಭರಣ ವಶಕ್ಕೆ!

ದಾವಣಗೆರೆ : ಬ್ಯಾಂಕ್ ಅಧಿಕಾರಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನ ಚಿನ್ನಾಭರಣವನ್ನು ಕದ್ದು ಬೇರೆಡೆ ಅಡವಿಟ್ಟು 2 ಕೋಟಿಗೂ ಅಧಿಕ ಸಾಲ ಪಡೆದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ನಗರದ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನ ಚಿನ್ನ ಸಾಲದ ಅಧಿಕಾರಿ ಟಿ.ಪಿ.ಸಂಜಯ್ (33) ಬಂಧಿತ ಆರೋಪಿ. ಕೆಲಸ ಮಾಡುತ್ತಿದ್ದ ಬ್ಯಾಂಕಿನಿಂದ ಕದ್ದು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದ 3 ಕೆ.ಜಿ 643 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬ್ಯಾಂಕಿನಲ್ಲಿ 2 ಕೆ.ಜಿ. 744 ಗ್ರಾಂ ನಕಲಿ ಚಿನ್ನಾಭರಣವನ್ನು ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ತಾನೇ ಅಡವಿಟ್ಟುಕೊಂಡು 1.52 ಕೋಟಿ ಸಾಲ ಪಡೆದಿದ್ದ ಸಂಗತಿ ಕೂಡ ಇದೀಗ ತನಿಖೆಯಲ್ಲಿ ಬಯಲಾಗಿದೆ.

ಬ್ಯಾಂಕಿನ ಅಧಿಕಾರಿಗಳು ಏಪ್ರಿಲ್‌ನಲ್ಲಿ ಚಿನ್ನಾಭರಣ ಸಾಲದ ಲೆಕ್ಕ ಪರಿಶೋಧನೆ ನಡೆಸಿದಾಗ ಗ್ರಾಹಕರು ಅಡವಿಟ್ಟಿದ್ದ ಚಿನ್ನ ಕಳವಾಗಿರುವ ಸಂಗತಿ ಪತ್ತೆಯಾಗಿತ್ತು. ಸಿ.ಸಿ.ಟಿವಿ ಪರಿಶೀಲಿಸಿದ ಬ್ಯಾಂಕ್ ಅಧಿಕಾರಿಗಳು ಕೆ.ಟಿ.ಜೆ ನಗರ ಠಾಣೆಯ ಮೆಟ್ಟಿಲೇರಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣವನ್ನು ಬೇರೆಡೆ ಅಡವಿಟ್ಟಿದ್ದು ಗೊತ್ತಾಗಿತ್ತು. ನ್ಯಾಯಾಲಯದ ಅನುಮತಿ ಪಡೆದು ಬ್ಯಾಂಕಿನಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್‌ನ ಚಿನ್ನ ಸಾಲದ ಅಧಿಕಾರಿಯಾಗಿ ಆರೋಪಿ 2024ರ ಅಕ್ಟೋಬರ್‌ನಿಂದ ಕೆಲಸ ಮಾಡುತ್ತಿದ್ದ. ಚಿನ್ನಾಭರಣವನ್ನು ಪರಿಶೀಲಿಸಿ ಅಡವಿಟ್ಟುಕೊಂಡು ದಾಖಲೆಗಳನ್ನು ಸೃಜಿಸುವುದು ಆರೋಪಿಯ ಜವಾಬ್ದಾರಿಯಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡು ಅಸಲಿ ಚಿನ್ನಾಭರಣವನ್ನು ಹಂತಹಂತವಾಗಿ ಕಳವು ಮಾಡಿದ್ದ. ಕಳವು ಮಾಡಿದ ಚಿನ್ನವನ್ನು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್‌ನಲ್ಲಿ ತಂದೆ, ತಾಯಿ ಹಾಗೂ ತನ್ನ ಹೆಸರಿನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ. ಆನ್‌ಲೈನ್ ಜೂಜು ಹಾಗೂ ಮೋಜು ಮಸ್ತಿಗೆ ಬಹುತೇಕ ಹಣವನ್ನು ಖರ್ಚು ಮಾಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.

ಇದನ್ನೂ ಓದಿ : ಪಾಕ್​ಗೆ ಮತ್ತೊಂದು ದೊಡ್ಡ ಆಘಾತ – ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ!

Btv Kannada
Author: Btv Kannada

Read More