ಹಾಸನ : ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಪತ್ ಮೃತದೇಹ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಪತ್ತೆಯಾಗಿದೆ. ಆರೋಪಿ ಸಂಪತ್ ಕಾರು ಸಂಪೂರ್ಣ ರಕ್ತಸಿಕ್ತವಾಗಿ ಸಿಕ್ಕಿದೆ. ಹಾಗಾಗಿ ಸಂಪತ್ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಶವವನ್ನು ಕಾರಿನಲ್ಲಿ ಬಿಸಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಏ.9 ರಂದು ಸಂಪತ್ ಕುಶಾಲನಗರದಿಂದ ತಮ್ಮ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಬಂದಿದ್ದರು. ಏಪ್ರಿಲ್ 10 ರಂದು ಕಲ್ಲಹಳ್ಳಿ ಗ್ರಾಮದ ಬಳಿ ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತ ಹರಿದಿರುವುದನ್ನು ಗಮನಿಸಿದ್ದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಯಸಳೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಅತ್ತ, ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಸಂಪತ್ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ
2022ರಲ್ಲಿ ಅಪಾರ ಮಳೆಯಾಗಿ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಅಪಾರ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಪ್ರವಾಹದಿಂದ ಹಾನಿಯಾಗಿದ್ದ ಪ್ರದೇಶಗಳ ವೀಕ್ಷಣೆಗೆಂದು 2022ರ ಆಗಸ್ಟ್ 18 ರಂದು ತೆರಳಿದ್ದರು. ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿ ಮಡಿಕೇರಿಗೆ ಬರುತ್ತಿದ್ದರು. ದಾರಿ ಮಧ್ಯೆ ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಎದುರು ಕಪ್ಪು ಬಾವುಟ ತೋರಿಸಿ ಗೋ ಬ್ಯಾಕ್ ಸಿದ್ದರಾಮಯ್ಯ ಅಂತ ಘೋಷಣೆ ಕೂಗಿದ್ದರು. ಇದೇ ವೇಳೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಸಿದ್ದರಾಮಯ್ಯ ಅವರು ವೀರ್ ಸಾವರ್ಕರ್ ಅವರ ವಿರುದ್ಧ ನೀಡಿದ್ದ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರ.. ಸೂ* ಸರ್ಕಾರ ಎಂದ ಚನ್ನರಾಯಪಟ್ಟಣ ತಹಶೀಲ್ದಾರ್ – ನಾಲಗೆ ಹರಿಬಿಟ್ಟ KAS ಅಧಿಕಾರಿ ವಿರುದ್ಧ ಭುಗಿಲೆದ್ದ ಆಕ್ರೋಶ!
