ಪ್ರಧಾನಿ ಮೋದಿ ವಾರ್ನಿಂಗ್‌‌ಗೆ ಪತರುಗುಟ್ಟಿದ ಪಾಕ್​ – ವಶಕ್ಕೆ ಪಡೆದಿದ್ದ BSF ಯೋಧ ಭಾರತಕ್ಕೆ ವಾಪಸ್​!

ನವದೆಹಲಿ : ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಕ್ಸಸ್ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಪಾಕಿಸ್ತಾನವು ಈ ತಿಂಗಳ ಆರಂಭದಲ್ಲಿ ವಶಕ್ಕೆ ಪಡೆದಿದ್ದ ಭಾರತೀಯ BSF ಯೋಧ ಪೂರ್ಣಮ್‌ ಕುಮಾರ್​ನನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 23ರಿಂದ ಪಾಕಿಸ್ತಾನದ ವಶದಲ್ಲಿದ್ದ ಬಿಎಸ್‌ಎಫ್ ಜವಾನ್ ಪೂರ್ಣಮ್​ ಕುಮಾರ್ ಅವರನ್ನು ಇಂದು ಬೆಳಿಗ್ಗೆ 10:30ರ ಸುಮಾರಿಗೆ ಅಮೃತಸರದ ಅಟ್ಟಾರಿಯ ಜಂಟಿ ಚೆಕ್ ಪೋಸ್ಟ್‌ನಲ್ಲಿ ಅಧಿಕೃತವಾಗಿ ಭಾರತೀಯ ಅಧಿಕಾರಿಗಳಿಗೆ  ಹಸ್ತಾಂತರಿಸಲಾಗಿದೆ.

ಏಪ್ರಿಲ್ 23, 2025ರಂದು, ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಮಾಮ್‌ಡೋಟ್ ಸೆಕ್ಟರ್‌ನಲ್ಲಿ, ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ನ ಕಾನ್‌ಸ್ಟೇಬಲ್ ಪೂರ್ಣಮ್ ಕುಮಾರ್ ಅವರು ಗಡಿ ಸಮೀಪದ ರೈತರಿಗೆ ರಕ್ಷಣೆ ನೀಡುವ ‘ಕಿಸಾನ್ ಗಾರ್ಡ್’’ ಕರ್ತವ್ಯದಲ್ಲಿದ್ದಾಗ, ತಪ್ಪಾಗಿ ಪಾಕಿಸ್ತಾನದ ಗಡಿಗೆ ದಾಟಿದ್ದರು.

ಗಡಿಯ ‘ಜೀರೋ ಲೈನ್’ ಸಮೀಪ ನೆರಳಿನಲ್ಲಿ ವಿಶ್ರಾಂತಿಗಾಗಿ ಕುಳಿತಿದ್ದ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದರು. ಈ ಘಟನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯ (26 ಜನರ ಮರಣ) ನಂತರ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಸಂದರ್ಭದಲ್ಲಿ ಸಂಭವಿಸಿತು. ಇದರಿಂದ ಪೂರ್ಣಮ್ ಅವರ ತಕ್ಷಣದ ಬಿಡುಗಡೆ ಕಷ್ಟಕರವಾಗಿತ್ತು. ಇದೀಗ ಪೂರ್ಣಮ್ ಅವರ ಮರಳುವಿಕೆಯು ಅವರ ಸ್ನೇಹಿತರು, ಸಂಬಂಧಿಕರಿಗೆ ಸಮಾಧಾನ ತಂದಿದೆ. ಬಿಎಸ್‌ಎಫ್ ಈ ಯಶಸ್ವಿ ಬಿಡುಗಡೆಗೆ ಎರಡೂ ದೇಶಗಳ ಅಧಿಕಾರಿಗಳ ಸಹಕಾರವನ್ನು ಶ್ಲಾಘಿಸಿದೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್​ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್ ಗವಾಯಿ ಪ್ರಮಾಣ ವಚನ ಸ್ವೀಕಾರ!

 

Btv Kannada
Author: Btv Kannada

Read More