ಬೆಂಗಳೂರಲ್ಲಿ ‘ಆಪರೇಷನ್‌ ಸಿಂಧೂರ’ ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ – ಛತ್ತೀಸ್​ಗಢ ಮೂಲದ ಟೆಕ್ಕಿ ಬಂಧನ!

ಬೆಂಗಳೂರು : ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ಪ್ರಶಾಂತ್ ಲೇಔಟ್‌ನ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಛತ್ತೀಸ್‌ಗಢ ಮೂಲದ 26 ವರ್ಷದ ಶುಭಾಂಶು ಶುಕ್ಲಾ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯು ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಮೇ 9ರ ಮಧ್ಯರಾತ್ರಿ 12.30ರ ಸಮಯದಲ್ಲಿ, ಪಿಜಿಯಲ್ಲಿದ್ದ ಇತರ ಯುವಕರು ‘ಆಪರೇಷನ್ ಸಿಂಧೂರ್’ ಯಶಸ್ಸನ್ನು ಸಂಭ್ರಮಿಸುತ್ತಿದ್ದ ವೇಳೆ ಬಾಲ್ಕನಿಯಲ್ಲಿ ನಿಂತು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾನೆ ಎಂದು ತಿಳಿದುಬಂದಿದೆ.

ಉಗ್ರರು ಬಂದೇ ಬಿಟ್ಟರು ಎಂದು ಹೆದರಿದ್ದ ಯುವಕರು : ಪಾಕಿಸ್ತಾನ ಪರ ಘೋಷಣೆ ಕೇಳುತ್ತಿದ್ದಂತೆಯೇ, ಉಗ್ರರು ಇಲ್ಲಿಗೂ ಬಂದೇ ಬಿಟ್ಟರು ಎಂದು ಇತರ ಯುವಕರು ಭೀತಿಗೊಳಗಾಗಿದ್ದಾರೆ. ಪಿಜಿಯಲ್ಲಿದ್ದ ಇನ್ನಿತರ ಯುವಕರು ಭಯಗೊಂಡು ಹೊರಗೆ ಬಂದಾಗ, ಎರಡು ಮಂದಿ ಬಾಲ್ಕನಿಯಲ್ಲಿ ನಿಂತಿರುವುದು ಕಾಣಿಸಿದೆ. ಆ ಇಬ್ಬರಲ್ಲಿ ಒಬ್ಬನಾದ ಶುಭಾಂಶು ಪಾಕ್ ಪರ ಘೋಷಣೆ ಕೂಗುತ್ತಿದ್ದುದು ಕಾಣಿಸಿದೆ. ಎದುರಿನ ಪಿಜಿಯಲ್ಲಿದ್ದ ಯುವಕ ಈ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದ.

ನಂತರ ಅಲ್ಲಿದ್ದ ಯುವಕರು ತುರ್ತು ಸಹಾಯವಾಣಿ ಸಂರ್ಖಯೆ 112ಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಶುಭಾಂಶು ಪಾಕ್ ಪರ ಘೋಷಣೆ ಕೂಗಿದ್ದು, ವಿಚಾರಣೆ ವೇಳೆ ದೃಢಪಟ್ಟಿದ್ದು, ವೈಟ್‌ಫೀಲ್ಡ್ ಠಾಣೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

Btv Kannada
Author: Btv Kannada

Read More