ನವದೆಹಲಿ : ಕಾಶ್ಮೀರ ವಿಷಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಯಾಗಿದೆ. ಅದನ್ನು ಉಭಯ ರಾಷ್ಟ್ರಗಳು ಮಾತ್ರ ಬಗೆಹರಿಸಿಕೊಳ್ಳಲಿವೆ. ಇದರಲ್ಲಿ ಬೇರೊಬ್ಬರ ಮಧ್ಯಸ್ಥಿಕೆ ಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಕಾಶ್ಮೀರ ವಿವಾದದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದರು. ಈ ಕುರಿತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಬೆನ್ನಲ್ಲೇ, ಭಾರತ ಸರ್ಕಾರ ಇದೀಗ ಸ್ಪಷ್ಟನೆ ನೀಡಿದೆ.
ಹೌದು.. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಕಾಶ್ಮೀರದ ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯನ್ನೂ ಭಾರತ ಸ್ವೀಕರಿಸುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಯ ಮಾತ್ರ. ಭಾರತದ ನಿಲುವು ಸ್ಪಷ್ಟ ಮತ್ತು ದೃಢವಾಗಿದೆ. ಭಾರತದ ಈ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು (ಪಿಒಕೆ)ಯನ್ನು ಬಿಟ್ಟು ತೊಲಗಬೇಕು ಎಂದಿದ್ದಾರೆ.
ಪಾಕಿಸ್ತಾನ ಭಯೋತ್ಪಾದನೆಯನ್ನು ಕೈಗಾರಿಕೆಯ ರೀತಿ ಬೆಳೆಸುತ್ತಿದೆ. ಜಮ್ಮು ಕಾಶ್ಮೀರ ವಿಷಯವನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಲಾಗುತ್ತದೆ. ಪಾಕಿಸ್ತಾನವು ಕದನ ವಿರಾಮ ಉಲಂಘಿಸಿದರೆ, ನಮ್ಮ ಸೇನೆ ಪ್ರತಿ ದಾಳಿ ಮಾಡುತ್ತದೆ. ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದ ಸಸ್ಪೆಂಡ್ನಲ್ಲಿದೆ. ಈಗಿನ ವಿಷಯ ಪಿಓಕೆ ಬಗ್ಗೆ ಮಾತ್ರ. ಪಾಕಿಸ್ತಾನವು ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಸಿಂಧೂ ನದಿ ಒಪ್ಪಂದ ಸಸ್ಪೆಂಡ್ ಆಗಿರಲಿದೆ ಎಂದಿದ್ದಾರೆ.
ಇದನ್ನೂ ಓದಿ : ಕೌಟುಂಬಿಕ ಕಥಾಹಂದರ ಹೊಂದಿರುವ ‘ಮಾತೊಂದ ಹೇಳುವೆ’ ಚಿತ್ರ ಜೂ.13ಕ್ಕೆ ರಿಲೀಸ್!
