ಬೆಂಗಳೂರು : ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿ ಅಪಮಾನ ಮಾಡಿದ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಹಾಗೂ ಇತರರ ವಿರುದ್ದ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಮೇ 8ರಂದು ಜಯನಗರ 9ನೇ ಬ್ಲಾಕ್ನಲ್ಲಿರುವ ಬಲಮುರಿ ವಿನಾಯಕ ಸುಬ್ರಹ್ಮಣ್ಯ ದೇವಾಲಯದ ಬಳಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ ರಾಮಮೂರ್ತಿ ಮತ್ತು ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮ ಆಯೋಜಿಸಿದ್ದರು.
ಈ ಸಂದರ್ಭ ಸಿಹಿ ಹಂಚುವಾಗ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿಯವರ ಪಕ್ಕದಲ್ಲಿದ್ದ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣಪ್ಪ ರಾಷ್ಟ್ರಧ್ವಜವನ್ನು ಕರಾವಸ್ತ್ರದಂತೆ ಬಳಸಿಕೊಂಡು ಕೈ ಒರೆಸಿಕೊಂಡಿದ್ದಾರೆ. ರಾಷ್ಟ್ರಧ್ವಜದಲ್ಲಿ ಕೈ ಒರೆಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿತ್ತು. ಬಳಿಕ ಆಗ್ನೇಯ ವಿಭಾಗ ಉಪ ಪೊಲೀಸ್ ಆಯುಕ್ತರಿಗೂ ಈ ಕುರಿತು ದೂರು ಸಲ್ಲಿಕೆಯಾಗಿತ್ತು. ಈ ಬೆನ್ನಲ್ಲೇ ಇದೀಗ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಹಾಗೂ ಇತರರ ವಿರುದ್ದ ತಿಲಕ್ ನಗರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ – ಪಾಕ್ ಪರ ವಿಡಿಯೋ ಹರಿಬಿಟ್ಟಿದ್ದ ಯುವಕ ನವಾಜ್ ಬಂಧನ!
