ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಅವಘಡ – ಧಗಧಗನೆ ಹೊತ್ತಿ ಉರಿದ ಆಯಿಲ್ ಗೋದಾಮು..​ ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ!

ನೆಲಮಂಗಲ : ಬೆಳ್ಳಂಬೆಳಗ್ಗೆ ಆಯಿಲ್‌ ಗೋದಾಮು ಧಗಧಗನೆ ಹೊತ್ತಿ ಉರಿದ ಘಟನೆ ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಬಳಿ ನಡೆದಿದೆ. ಶಲ್‌ ಕಂಪನಿಗೆ ಸೇರಿದ ಆಯಿಲ್‌ ಗೋದಾಮು, ಬೆಂಕಿಯ ನರ್ತನಕ್ಕೆ ಸಂಪೂರ್ಣ ಭಸ್ಮವಾಗಿದೆ.

ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ನೆಲಮಂಗಲ, ಪೀಣ್ಯಾ, ಯಶವಂತಪುರ ಭಾಗದ 8ಕ್ಕೂ ಹೆಚ್ಚು ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದೆ.

ಶಾರ್ಟ್ ಸರ್ಕ್ಯೂಟ್​ನಿಂದ ಆಯಿಲ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಬೆಂಕಿಯ ನರ್ತನ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಅಕ್ಕದ ಗೋದಾಮು ಮನೆಗೆ ಬೆಂಕಿ ತಗುಲುವ ಆತಂಕ ಎದುರಾಗಿದೆ. ಸರಿಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಯಿಲ್ ಬೆಂಕಿಗಾಹುತಿ ಆಗಿರಬಹುದು ಎನ್ನಲಾಗಿದೆ. 40 ಸಾವಿರ ಅಡಿಯಲ್ಲಿನ ಗೋದಾಮು ಸಂಪೂರ್ಣವಾಗಿ ಬೆಂಕಿಯಿಂದ ನಾಶವಾಗಿದೆ.

ಭಾರತ-ಪಾಕಿಸ್ತಾನ ನಡುವಿನ ಯುದ್ಧ ಆರಂಭ ಹಿನ್ನೆಲೆ ಹೆಚ್ಚಿನ ಸ್ಟಾಕ್ ಶೇಖರಣೆ ಮಾಡಲಾಗಿತ್ತು. ಯುದ್ಧದ ಪರಿಣಾಮವಾಗಿ ಕಂಪನಿ ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಶೇಖರಣೆ ಮಾಡಿತ್ತು. ರಾಜ್ಯದಲ್ಲಿ ಯಾವುದೇ ಆಯಿಲ್ ಸಮಸ್ಯೆ ಬಾರದಂತೆ ಸಂಗ್ರಹಣೆ ಮಾಡಲಾಗಿತ್ತು. ಆದರೆ, ಬೆಂಕಿ ಅವಘಡದಿಂದ ಆಯಿಲ್‌ ನಷ್ಟವಾಗಿದೆ.

ಬೆಂಕಿಗಾಹುತಿಯಾಗಿರೋ ಆಯಿಲ್‌ ಗೋದಾಮು, ಮಾಜಿ ಕಂದಾಯ ಸಚಿವ ಎಚ್.ಸಿ ಶ್ರೀಕಂಠಯ್ಯ ಅಳಿಯ ಕೃಷ್ಣಪ್ಪ ಎಂಬುವರಿಗೆ ಸೇರಿದೆ ಎಂದು ತಿಳಿದುಬಂದಿದೆ. ಇದನ್ನು ಶಲ್ ಕಂಪನಿಗೆ ಬಾಡಿಗೆ ನೀಡಲಾಗಿತ್ತು.

ಇದನ್ನೂ ಓದಿ : ಬೆಂಗಳೂರು ಸೇರಿ ರಾಜ್ಯ 21 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ – ಯೆಲ್ಲೋ ಅಲರ್ಟ್ ಘೋಷಣೆ​!

Btv Kannada
Author: Btv Kannada

Read More