ರಾಯಚೂರು : ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದಿರುವ ಮಂತ್ರಾಲಯಕ್ಕೆ ರಿಯಲ್ ಸ್ಟಾರ್, ನಟ ಉಪೇಂದ್ರ ಕುಟುಂಬ ಸಮೇತ ತೆರಳಿ ಶ್ರೀರಾಘವೇಂದ್ರ ಸ್ವಾಮಿ ದರ್ಶನ ಪಡೆದಿದ್ದಾರೆ.
ನಟ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ ಹಾಗೂ ಮಕ್ಕಳೊಂದಿಗೆ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದು, ಮೊದಲಿಗೆ ಶ್ರೀ ಮಂಚಲಮ್ಮ ದೇವಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಬಳಿಕ ರಾಯರ ಮೂಲ ಬೃಂದಾವನ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಬಳಿಕ ಮಠದ ಆವರಣದಲ್ಲಿ ನಡೆದ ರಥೊತ್ಸವದಲ್ಲಿ ಭಾಗಿಯಾಗಿದ್ದಾರೆ.
ಆನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿ, ಪೀಠಾಧಿಪತಿಗಳಿಗೆ ಸನ್ಮಾನಿಸಿದರು. ಈ ವೇಳೆ, ಮಠಾಧೀಶರು ಮಠದಿಂದ ಉಪೇಂದ್ರ ದಂಪತಿ, ಕುಟುಂಬ ಸದಸ್ಯರಿಗೆ ಫಲಮಂತ್ರಾಕ್ಷತೆ, ಶೇಷವಸ್ತ್ರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿ ಆಶೀರ್ವದಿಸಿದರು. ಇದೇ ವೇಳೆ ಕನ್ನಡ ಹಿರಿಯ ನಟಿ ತಾರಾ ಕುಟುಂಬವೂ ಸಹ ಮಠಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ದರ್ಶನ ಪಡೆದು, ವಿಶೇಷ ಪೂಜೆ ನೇರವೇರಿಸಿತು. ಬಳಿಕ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಸ್ಯಾಂಡಲ್ವುಡ್ಗೆ ರಿಯಲ್ ಸ್ಟಾರ್ ಉಪ್ಪಿ ಪುತ್ರ ಆಯುಷ್ ಎಂಟ್ರಿ ಫಿಕ್ಸ್ : ಉಪ್ಪಿ ಪುತ್ರ ಆಯುಷ್ ಹುಟ್ಟುಹಬ್ಬ ದಿನವೇ ಮಂತ್ರಾಲಯಕ್ಕೆ ಎರಡೂ ಕುಟುಂಬ ಭೇಟಿ ಕೊಟ್ಟಿದ್ದು, ಶೀಘ್ರವೇ ಇಂಡಸ್ಟ್ರಿಗೆ ಆಯುಷ್ನ್ನು ಪರಿಚಯಿಸಲಿದೆ. ‘ಮೊದಲಾಸಲ’ ಸಿನಿಮಾದ ಪುರುಷೋತಮ್ ಡೈರೆಕ್ಷನ್ನಲ್ಲಿ ಆಯುಷ್ ಉಪೇಂದ್ರ ಲಾಂಚ್ ಆಗಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಉಪ್ಪಿ ಕುಟುಂಬ, ನಟಿ ತಾರಾ ಕುಟುಂಬ ಆಯುಷ್ ಹುಟ್ಟುಹಬ್ಬದ ಹಿನ್ನಲೆ ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದು, ನಟಿ ತಾರಾ ಪತಿ ವೇಣುಗೋಪಾಲ್ ಅವರೇ ಉಪ್ಪಿ ಪುತ್ರನ ಮೊದಲ ಸಿನಿಮಾಗೆ ಕ್ಯಾಮರಮ್ಯಾನ್ ಆಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ‘ಚೇಸ್ ಮಾಸ್ಟರ್’ ಫ್ಯಾನ್ಸ್ಗೆ ಶಾಕ್.. ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ!
