ಇನ್ನೊಂದು ತಿಂಗಳಲ್ಲಿ ‘ಸಿಲಿಕಾನ್​ ಸಿಟಿ’ ಫುಲ್​​ ಕ್ಲೀನ್​ – ‘ಸ್ವಚ್ಛ ನೋಟ’ ಗ್ಯಾರಂಟಿ ಎಂದ BBMP ಕಮಿಷನರ್​ ಮಹೇಶ್ವರ್ ರಾವ್!

ಬೆಂಗಳೂರು : ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ​​ಕ್ಲೀನ್ ಸಿಟಿಯಾಗುವ ಕಾಲ ಹತ್ತಿರವಾಗುತ್ತಿದೆ. ಟ್ರಾಫಿಕ್​​ ಜಾಮ್, ಮಳೆ ಅವಾಂತರ, ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿರುವ ಬೆಂಗಳೂರಿಗೆ ಕಾಯಕಲ್ಪ ಸಿಗೋದು ಗ್ಯಾರಂಟಿ.. BBMP ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಮಹೇಶ್ವರ್ ರಾವ್ ಅವರು ಬೆಂಗಳೂರನ್ನು ‘ಸ್ವಚ್ಛ’ ನಗರಿ ಮಾಡಲು ಪಣ ತೊಟ್ಟಿದ್ದಾರೆ. ಈ ಬೆನ್ನಲ್ಲೇ ನಗರದಾದ್ಯಂತ ಸ್ಚಚ್ಛತೆಗೆ ಮುಂದಾಗಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾಗಿರುವ ಮಹೇಶ್ವರ್ ರಾವ್ ಅವರು ನಗರದ ಪಾದಚಾರಿ ಮಾರ್ಗಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಿಗೆ ಇನ್ನೊಂದು ತಿಂಗಳಲ್ಲಿ ‘ಸ್ವಚ್ಛ ನೋಟ’ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಯಾವ ಕೆಲಸ ಮಾಡಬೇಕು ಎಂಬುದನ್ನು ನಮಗೆ ತಿಳಿಸಿದ್ದಾರೆ. ಅದರಂತೆ ಕಾರ್ಯಗಳನ್ನು ಅನುಷ್ಠಾನ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.

ನಗರ ಸ್ವಚ್ಛವಾಗಿರಬೇಕು ಎಂದು ಕಟ್ಟಡ ತ್ಯಾಜ್ಯ ಮತ್ತು ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸುವ ಅಭಿಯಾನವನ್ನು ನಡೆಸಲಾಗಿದೆ. ಶೇಕಡ 90ರಷ್ಟು ಯಶಸಾಧಿಸಲಾಗಿದ್ದು, ಸ್ವಚ್ಛತಾ ಕಾರ್ಯ ಮುಂದುವರಿದಿದೆ. ಇನ್ನು ಮಳೆಗಾಲದ ಸಂದರ್ಭದಲ್ಲಿ ಅತಿಹೆಚ್ಚು ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳು ಹಾಗೂ ರಸ್ತೆಯಲ್ಲಿ ನೀರು ತುಂಬಿಕೊಳ್ಳುವ ಸ್ಥಳಗಳನ್ನು ಗುರುತಿಸಲಾಗಿದ್ದು, ಹಲವೆಡೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಲಾಗಿದೆ. ಸಂಚಾರ ವಿಭಾಗದ ಪೊಲೀಸರ ನೆರವಿನೊಂದಿಗೆ ಅವರು ಶಿಫಾರಸು ಮಾಡಿರುವ ಸ್ಥಳಗಳನ್ನೂ ಪಟ್ಟಿ ಮಾಡಿ ಪರಿಹಾರ ಕಾರ್ಯ ಕೈಗೊಂಡಿದ್ದೇವೆ ಎಂದು ಮಹೇಶ್ವರ್ ರಾವ್ ತಿಳಿಸಿದರು.

ಹಾಗೆಯೇ ಮಹದೇವಪುರ, ನಾಗವಾರ ಹಾಗೂ ನಾಯಂಡಳ್ಳಿಯ ಕೆಲವು ಪ್ರದೇಶಗಳಲ್ಲಿ ಒತ್ತುವರಿಯಿಂದ ಪ್ರವಾಹ ಉಂಟಾಗುತ್ತಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚೆ ನಡೆಸಲಾಗಿದ್ದು, ಒತ್ತುವರಿ ತೆರವಿಗೆ ಸೂಕ್ತ ಆದೇಶಗಳನ್ನು ಪಡೆಯಲಾಗುತ್ತದೆ ಎಂದರು.

ಕಾಮಗಾರಿ ಮುಗಿಸಲು ಸೂಚನೆ : ನಗರದಲ್ಲಿ ಕೆಪಿಟಿಸಿಎಲ್, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ನಡೆಸುತ್ತಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವ ಮುನ್ನ ಮುಗಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನಿಗಾ ವಹಿಸಬೇಕು. ಯೋಜನೆ ವಿಭಾಗದ ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರಿಗೆ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಮಾರುಕಟ್ಟೆಗಳ ಮರು ಅಭಿವೃದ್ಧಿ ಹಾಗೂ ಅವುಗಳಿಂದ ಹೆಚ್ಚಿನ ಆದಾಯ ಬರುವಂತೆ ಮಾಡಲು ವಿಶೇಷ ಯೋಜನೆಯನ್ನು ರೂಪಿಸಲಾಗುತ್ತದೆ. ಕೆಲವು ದಿನಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ. ನಗರದಲ್ಲಿರುವ ಎಲ್ಲ ಉದ್ಯಾನಗಳನ್ನು ಬಿಬಿಎಂಪಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿದೆ. ತನ್ನ ಬಡಾವಣೆಗಳಲ್ಲಿರುವ ಉದ್ಯಾನಗಳನ್ನು ಹಸ್ತಾಂತರಿಸುವಂತೆ ಬಿಡಿಎಗೆ ಮನವಿ ಮಾಡಿಕೊಳ್ಳಲಾಗಿದೆ. ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.

1300 ರಸ್ತೆ ಗುಂಡಿ ದುರಸ್ತಿಕ್ಕೆ ಕ್ರಮ : ಬಿಬಿಎಂಪಿ ವ್ಯಾಪ್ತಿಯಲ್ಲಿ 1300 ರಸ್ತೆ ಗುಂಡಿಗಳನ್ನು ದುರಸ್ತಿ ಮಾಡುವ ಕಾಮಗಾರಿ ಚಾಲನೆಯಲ್ಲಿದೆ. ರಸ್ತೆ ಗುಂಡಿ ದುರಸ್ತಿ ನಿರಂತರ ಪ್ರಕ್ರಿಯೆಯಾಗಿದೆ ಎಂದು ಮಹೇಶ್ವರ ರಾವ್ ಹೇಳಿದರು. ಜಲಮಂಡಳಿ ಸೇರಿದಂತೆ ಯಾವುದೇ ಇಲಾಖೆಗಳು ರಸ್ತೆಗಳನ್ನು ಅಗೆದಿದ್ದರೆ ಅವುಗಳನ್ನು ಈ ತಿಂಗಳ ಅಂತ್ಯದೊಳಗೆ ದುರಸ್ತಿ ಮಾಡಲು ಸೂಚಿಸಲಾಗಿದೆ ಎಂದರು.

ಮೆಜೆಸ್ಟಿಕ್ ಸುತ್ತಮುತ್ತ ಪಾದಚಾರಿ ಮಾರ್ಗಗಳು ಹಲವು ಸಮಸ್ಯೆಗಳನ್ನು ಹೊಂದಿದ್ದು ಒಂದು ವಾರದೊಳಗೆ ಇವುಗಳ ನೋಟವನ್ನು ಬದಲಿಸುವುದಾಗಿ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಳರ ವಿಕಾಶ್ ಕಿಶೋರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಪ್ರಮುಖವಾಗಿ  ಐದು ಕೆಲಸದತ್ತ ಗಮನ : ‘ನಗರದಲ್ಲಿ ಅತ್ಯಂತ ಅಗತ್ಯವಿರುವ ಐದು ಕೆಲಸಗಳತ್ತ ಹೆಚ್ಚು ಗಮನಹರಿಸಲಾಗಿದೆ. ಅವುಗಳನ್ನು ದಕ್ಷತೆಯಿಂದ ನಿರ್ವಹಿಸಿದರೆ ಹಲವು ಸಮಸ್ಯೆಗಳು ಬಗೆಹರಿಯಲಿವೆ. ಮಳೆಗಾಲದಲ್ಲಿ ಎಲ್ಲೂ ಪ್ರವಾಹದ ಸನ್ನಿವೇಶ ಉಂಟಾಗಬಾರದು ಪಾದಚಾರಿ ಮಾರ್ಗದಲ್ಲಿ ಜನರ ಓಡಾಟಕ್ಕೆ ಅಡೆತಡೆ ಇರಬಾರದು ರಸ್ತೆಬದಿ ಅಥವಾ ಇತರೆಡೆ ಎಲ್ಲೂ ಕಸ ಎಸೆಯುವ ‘ಬ್ಲ್ಯಾಕ್ ಸ್ಪಾಟ್’ಗಳಿರಬಾರದು, ಎಲ್ಲೂ ಕತ್ತಲೆ ಇಲ್ಲದಂತೆ ಬೀದಿದೀಪಗಳನ್ನು ನಿರ್ವಹಣೆ ಮಾಡಬೇಕು, ತ್ಯಾಜ್ಯ ಸಂಗ್ರಹ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಬಾರದು.. ಈ ಐದು ಮೂಲ ಕಾರ್ಯಗಳನ್ನು ನಾವು ದಕ್ಷತೆಯಿಂದ ನಿರ್ವಹಿಸಬೇಕಿದೆ. ಇದರ ಬಗ್ಗೆಯೇ ನಮ್ಮ ಗಮನ ಕೇಂದ್ರೀಕೃತವಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ : ಭಾರತ-ಪಾಕ್ ನಡುವೆ ಹೆಚ್ಚಿದ ಸಂಘರ್ಷ.. ದೇಶಾದ್ಯಂತ 24 ಏರ್‌ಪೋರ್ಟ್‌ಗಳು ಬಂದ್‌ – ಎಲ್ಲೆಡೆ ಹೈ ಅಲರ್ಟ್‌!

Btv Kannada
Author: Btv Kannada

Read More