ತುಮಕೂರು ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಪರಮೇಶ್ವರ್ ದಿಢೀರ್ ಭೇಟಿ, ಪರಿಶೀಲನೆ – 300 ಹಾಸಿಗೆಯ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ!

ತುಮಕೂರು : ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಸಂಜೆ ತುಮಕೂರು ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿನ ಟ್ರಾಮಾಕೇರ್ ಸೆಂಟರ್, ಮಕ್ಕಳ ವಾರ್ಡ್, ಹೆರಿಗೆ ವಾರ್ಡ್, ತೀವ್ರ ನಿಗಾ ಘಟಕಗಳನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ 132 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸುಸಜ್ಜಿತ ಆಸ್ಪತ್ರೆಯ ನೂತನ ಕಟ್ಟಡದ ನೀಲನಕ್ಷೆಯನ್ನು ಪರಿಶೀಲಿಸಿ, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಪ್ರಸ್ತುತ ಇರುವ ಜಿಲ್ಲಾಸ್ಪತ್ರೆಯ ಕಟ್ಟಡವು 78 ವರ್ಷ ಹಳೆಯದಾಗಿದ್ದು, ಅದನ್ನು ಆಧುನೀಕರಿಸಲು ಸಾಧ್ಯವಿಲ್ಲ. ಕಟ್ಟಡದ ಹಲವು ಭಾಗಗಳು ಶಿಥಿಲಗೊಳ್ಳುತ್ತಿವೆ. ಅಲ್ಲದೆ ಹಳೆಯ ಕಟ್ಟಡದ ಮೇಲೆ ಮೇಲಂತಸ್ತುಗಳ ನಿರ್ಮಾಣ ಸಾಧ್ಯವಿಲ್ಲದೆ ಇರುವುದರಿಂದ ನೂತನವಾಗಿ ಸುಸಜ್ಜಿತ ಹಾಗೂ ಆಧುನಿಕ ಸೌಲಭ್ಯವುಳ್ಳ 300 ಹಾಸಿಗೆಗಳ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಸಾರ್ವಜನಿಕರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಲು ನವೀನ ಸೌಲಭ್ಯಗಳಿಂದ ಕೂಡಿದ ಆಸ್ಪತ್ರೆ ಕಟ್ಟಡದ ನಿರ್ಮಾಣ ಅತೀ ಅಗತ್ಯವಾಗಿದೆ. ವಿನ್ಯಾಸದಲ್ಲಿ ಸುಲಭ ಪ್ರವೇಶ, ತುರ್ತು ಸೇವೆಗಳ ವೇಗ, ಸ್ವಚ್ಛತೆ ಹಾಗೂ ಸ್ಮಾರ್ಟ್ ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು ಎಂದು ಪರಮೇಶ್ವರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : “ಆಪರೇಷನ್ ಸಿಂಧೂರ” ಭಾರತೀಯ ಸೇನೆಗೆ ಸರ್ಕಾರ ಬೆಂಬಲ – ಸಿಎಂ ನೇತೃತ್ವದಲ್ಲಿ ನಾಳೆ ಬೆಂಗಳೂರಲ್ಲಿ ತಿರಂಗಾ ಯಾತ್ರೆ!

Btv Kannada
Author: Btv Kannada

Read More