ಬೆಂಗಳೂರು : ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಆದೇಶ ನೀಡಿದ್ದಾರೆ.
ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಮೂರು ಸಶಸ್ತ್ರ ಪಡೆಗಳ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ನಾಳೆ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ ಬೋರ್ಡ್ ಸಿಇಒಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
ಪೆಹಲ್ಗಾಮ್ ದಾಳಿಯಲ್ಲಿ ಅಮಾಯಕರ ಜೀವ ಪಡೆದ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ. ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ. ಉಗ್ರರಿಗೆ ಆಶ್ರಯ ನೀಡುವ ಪಾಕಿಸ್ತಾನಕ್ಕೆ ತಕ್ಕ ಪಾಠ. ನಮ್ಮ ತಂಟೆಗೆ ಬಂದರೆ ಉಗ್ರರಿಗೆ ಹಾಗೂ ಪಾಕಿಸ್ತಾನಕ್ಕೆ ಉಳಿಗಾಲ ಇಲ್ಲ ಎಂಬ ಸಂದೇಶ ರವಾನೆಯಾಗಿದೆ. ‘ನಮ್ಮ ಸೇನೆ ನಮ್ಮ ಹೆಮ್ಮೆ’ ಎಂದು ಹೇಳಿದ್ದಾರೆ. ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಭಯೋತ್ಪಾದಕ ಕೃತ್ಯ ಎಸಗುವ ಉಗ್ರಗಾಮಿ ಸಂಘಟನೆಗಳ ಹುಟ್ಟಡಗಿಸುವ ಹೋರಾಟದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಜತೆ ಇದ್ದೇವೆ ಎಂದು ಜಮೀರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಪಾಕ್ ಮೇಲೆ ಭಾರತ ‘ಸುದರ್ಶನ ಚಕ್ರ’ ಪ್ರಯೋಗ – ಲಾಹೋರ್ ಸೇರಿ ಹಲವು ಪ್ರದೇಶಗಳ ಸೇನಾ ನೆಲೆ ಧ್ವಂಸ!
