ನವದೆಹಲಿ : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಮಂಗಳವಾರ ತಡರಾತ್ರಿಯಿಂದ ಬುಧವಾರ ನಸುಕಿನ ಜಾವ ದಾಳಿ ನಡೆಸಿದೆ.
ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ರಾತ್ರಿಯಿಡೀ ಕಾರ್ಯಾಚರಣೆಯ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದಾರೆ. ಇದರ ಜೊತೆಗೆ, ಪ್ರಧಾನಿ ಮೋದಿ ಇಂದು ಬೆಳಿಗ್ಗೆ 11 ಗಂಟೆಗೆ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ಕರೆದಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ, ಪ್ರಧಾನ ಮಂತ್ರಿಯವರೇ ಈ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಿದ್ದಾರೆ. ಅವರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥರು, ಹಿರಿಯ ಗುಪ್ತಚರ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಿರಂತರವಾಗಿ ಮಾಹಿತಿ ನೀಡುತ್ತಿದ್ದರು.
ಭಾರತವು ಪಾಕ್ ಆಕ್ರಮಿತ ಪ್ರದೇಶದಲ್ಲಿ ಏರ್‌ಸ್ಟ್ರೈಕ್ ನಡೆಸಿದ್ದು, ‘ಆಪರೇಷನ್ ಸಿಂಧೂರ್’ ಹೆಸರಿಲ್ಲಿ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡಲಾಗಿದೆ. 70 ಕ್ಕೂ ಹೆಚ್ಚು ಉಗ್ರರರನ್ನು ಸಂಹಾರ ಮಾಡಲಾಗಿದ್ದು, ದಾಳಿಯಲ್ಲಿ ಸುಮಾರು 55 ಮಂದಿ ಉಗ್ರರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನಿ ಸೇನೆಯನ್ನು ಗುರಿಯಾಗಿಸಿಲ್ಲ : ಭಾರತೀಯ ಸೇನೆ ಸ್ಪಷ್ಟನೆ : ದಾಳಿಯ ನಂತರ ರಕ್ಷಣಾ ಸಚಿವಾಲಯವು ಬೆಳಗಿನ ಜಾವ 1:44 ಕ್ಕೆ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ದಾಳಿ ಪ್ರಚೋದನಕಾರಿಯಾಗಿಲ್ಲ ಎಂದು ಹೇಳಿದೆ. ಭಾರತೀಯ ಸೇನೆ ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಲ್ಲ. ನಮ್ಮ ದಾಳಿಗಳು ನಿರ್ದಿಷ್ಟವಾಗಿ ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಇದನ್ನೂ ಓದಿ : ಪಾಕ್ ಉಗ್ರರ 9 ನೆಲೆಗಳ ಮೇಲೆ ಭಾರತ ಏರ್‌ಸ್ಟ್ರೈಕ್ – ‘ಆಪರೇಷನ್ ಸಿಂಧೂರ’ಕ್ಕೆ 70ಕ್ಕೂ ಹೆಚ್ಚು ಭಯೋತ್ಪಾದಕರು ಉಡೀಸ್!
