ಹುಬ್ಬಳ್ಳಿ : ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಐದು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ವೇತಾ (29), ಅಂಜಲಿ (26), ಸಂದೀಪ್ (26), ವಿಠ್ಠಲ್ (55) ಹಾಗೂ ಶಶಿಕಲಾ (40) ಎಂದು ಗುರುತಿಸಲಾಗಿದೆ. ವಿಜಯಪುರ ಕಡೆಯಿಂದ ಹುಬ್ಬಳ್ಳಿಗ್ಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರೆಲ್ಲರೂ ಸಾಗರದವರಾಗಿದ್ದು, ಹೋಟೆಲ್ ವ್ಯಾಪಾರಕ್ಕೆಂದು ಬಾಗಲಕೋಟೆಗೆ ತೆರಳುತ್ತಿದ್ದರು. ಮರಳಿ ಹುಬ್ಬಳ್ಳಿ ಮಾರ್ಗವಾಗಿ ಶಿವಮೊಗ್ಗ ಕಡೆ ಬರುವಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ರಮೇಶ್ ಅರವಿಂದ್ ನಟನೆಯ “ದೈಜಿ” ಚಿತ್ರತಂಡಕ್ಕೆ ದಿಗಂತ್ ಸೇರ್ಪಡೆ!
