ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಅವರು ಕೋಪಗೊಂಡ ಘಟನೆ ನಡೆದಿದೆ. ಆದರೆ, ಇದಾದ ನಂತರ ಅವರು ಆಡಿರುವ ಮಾತುಗಳು ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಕ್ಷಮೆ ಕೇಳಲೇಬೇಕು, ಅಲ್ಲಿಯವರೆಗೆ ಅವರಲ್ಲಿ ಕನ್ನಡ ಹಾಡುಗಳನ್ನು ಅವರಿಂದ ಹಾಡಿಸಬಾರದು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದ್ದಾನೆ. ಆಗ ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಮಾತಾಡುವ ಭರದಲ್ಲಿ ಪಹಲ್ಗಾಮ್ ದಾಳಿ ಹಾಗೂ ಕರ್ನಾಟಕದ ಬಗ್ಗೆ ಮಾತಾಡಿ ಇದೀಗ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಸೋನು ನಿಗಮ್ ಹೇಳಿದ್ದೇನು? ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ದಿ ಬೆಸ್ಟ್ ಸಾಂಗ್ಸ್ ಹಾಡಿರೋದು ಹೆಚ್ಚು ಕನ್ನಡದಲ್ಲಿ. ಕರ್ನಾಟಕಕ್ಕೆ ಬರುವಾಗ ತುಂಬಾ ಖುಷಿಯಾಗುತ್ತೆ. ತುಂಬಾ ಆಸೆಯಿಂದಲೇ ಇಲ್ಲಿ ಬರ್ತೇನೆ. ಸಾಮಾನ್ಯವಾಗಿ ಕನ್ನಡ ಸಾಂಗ್ಸ್ ಹಾಡಿ ಅಂತ ಕೇಳ್ತಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ, ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ಆದರೆ ಆ ಹುಡುಗ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಕೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು, ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ : ಕನ್ನಡ ಹಾಡು ಹೇಳಿ ಅಂದಿದ್ದಕ್ಕೆ ಪಹಲ್ಗಾಮ್ ಉಗ್ರರ ದಾಳಿಯನ್ನು ಹೋಲಿಕೆ ಮಾಡಿದ ಸೋನು ನಿಗಮ್ ಅವರ ಹೇಳಿಕೆ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. “ಕರ್ನಾಟಕ ಪೊಲೀಸರು ಈ ಕೂಡಲೇ ಇವನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು. ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಹೇಗೆ ಕಾರಣವಾಗಲು ಸಾಧ್ಯ? ಕನ್ನಡದ ಅನ್ನ ತಿಂದು ಕೊಬ್ಬಿರುವ ಈತ ಅದು ಹೇಗೆ ಕರ್ನಾಟಕದಲ್ಲಿ ಇನ್ನು ಮೇಲೆ ಶೋಗಳನ್ನು ನಡೆಸುತ್ತಾನೆ ನೋಡೋಣ,” ಎಂದು ಕನ್ನಡ ಪರ ಹೋರಾಟಗಾರರು ಕಿಡಿಕಾರಿದ್ದಾರೆ.
ಕ್ಷಮೆ ಕೇಳಲು ಒತ್ತಾಯ.. ಸೋಶಿಯಲ್ ಮೀಡಿಯಾದಲ್ಲಿ ಗಾಯಕನ ವಿರುದ್ಧ ಕನ್ನಡಿಗರು, ಕನ್ನಡ ಚಿತ್ರರಂಗದ ಕಲಾವಿದರು ಆಕ್ರೋಶ ಹೊರಹಾಕುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು ಸೋನು ನಿಗಮ್ ಕ್ಷಮೆ ಕೇಳಲು ಒತ್ತಾಯಿಸಿದ್ದಾರೆ. ಅವರನ್ನು ಬ್ಯಾನ್ ಮಾಡುವ ಒತ್ತಾಯವೂ ಕೇಳಿ ಬಂದಿದೆ.
ಇದನ್ನೂ ಓದಿ : ‘ಮೋಳಿಗೆ ಮಾರಯ್ಯ’ ಸಿನಿಮಾದ ಹಾಡುಗಳ ಅನಾವರಣ – ಚಿತ್ರಂಡಕ್ಕೆ ಶುಭಹಾರೈಸಿದ ಬೇಲಿ ಮಠದ ಶ್ರೀಗಳು!
