‘ಮೋಳಿಗೆ ಮಾರಯ್ಯ’ ಸಿನಿಮಾದ ಹಾಡುಗಳ ಅನಾವರಣ – ಚಿತ್ರಂಡಕ್ಕೆ ಶುಭಹಾರೈಸಿದ ಬೇಲಿ ಮಠದ ಶ್ರೀಗಳು!

ಮಧುಸೂದನ್ ಹವಾಲ್ದಾರ್ ನಿರ್ಮಾಣ, ನಿರ್ದೇಶನ ಹಾಗೂ ಸಂಗೀತ ನಿರ್ದೇಶನದ “ಮೋಳಿಗೆ ಮಾರಯ್ಯ” ಚಿತ್ರದ ಹಾಡುಗಳ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಶುಭದಿನದಂದು ನೆರವೇರಿತು. ಬೇಲಿ ಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಭಕ್ತಿಪ್ರಧಾನ ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಧುಸೂದನ್ ಹವಾಲ್ದಾರ್ ಅವರು ಮಹಾನ್ ಶರಣರಾದ “ಮೋಳಿಗೆ ಮಾರಯ್ಯ” ಅವರ ಕುರಿತಾದ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷ ತಂದಿದೆ. ಇಂತಹ ಪ್ರಯತ್ನಗಳು ಮಧುಸೂದನ್ ಅವರಿಂದ ಇನ್ನೂ ಹೆಚ್ಚು ಆಗಲಿ ಎಂದು ಶ್ರೀಗಳು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಧುಸೂದನ್ ಹವಾಲ್ದಾರ್ ಅವರು, ನಾನು ಹಿಂದಿನ ಚಿತ್ರದ ಯಶಸ್ಸಿನ ಯಾತ್ರೆಯ ಸಂದರ್ಭದಲ್ಲಿ ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಸ್ವಾಮಿಗಳನ್ನು ಭೇಟಿಯಾಗಿದ್ದೆ. ಆಗ ಅವರು ನೀವು ದಾಸರ ಚಿತ್ರಗಳ ಜೊತೆಗೆ ಮಾಹನ್ ಶರಣರ ಚಿತ್ರಗಳನ್ನು ಮಾಡಿ ಎಂದರು. ಯಾರ ಚಿತ್ರ‌ ಮಾಡಬೇಕೆಂದು ಶ್ರೀಗಳಲ್ಲಿ ಕೇಳಿದಾಗ, ಅವರು ಸಾಣೇಹಳ್ಳಿ ಶ್ರೀಗಳನ್ನು ಭೇಟಿ ಮಾಡುವಂತೆ ಹೇಳಿದರು. ಸಾಣೇಹಳ್ಳಿ ಶ್ರೀಗಳು ನಾನು ಶರಣ “ಮೋಳಿಗೆ ಮಾರಯ್ಯ” ಅವರ ಕುರಿತು ನಾಟಕ ಬರೆದಿದ್ದೇನೆ. ಅದನ್ನು ಓದಿ ಎಂದು ಹೇಳಿದರು.

ಕಾಶ್ಮೀರದ ರಾಜ ಬಸವ ತತ್ವ ಅನುಯಾಯಿಯಾಗಿ ಕಲ್ಯಾಣಕ್ಕೆ ಬಂದು ಸಾಮಾನ್ಯರಂತೆ ಜೀವನ ನಡೆಸಿ ಮಹಾನ್ ಶರಣರಾಗುತ್ತಾರೆ. ಈಗ “ಮೋಳಿಗೆ ಮಾರಯ್ಯ” ಅವರ ಜೀವನ ಚರಿತ್ರೆಯನ್ನು ಸಿನಿಮಾ ರೂಪದಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೇನೆ. ಅದರ ಮೊದಲ ಹೆಜ್ಜೆಯಾಗಿ ಇಂದು ಚಿತ್ರದ ಐದು ಹಾಡುಗಳನ್ನು ಪೂಜ್ಯ ಶ್ರೀಗಳಿಂದ ಬಿಡುಗಡೆ ಮಾಡಿಸಿದ್ದೇವೆ. ನನ್ನ ಹಿಂದಿನ ಚಿತ್ರಗಳಲ್ಲಿ ನಟಿಸಿದ್ದ ಗಂಗಾವತಿಯ ವಿಷ್ಣುತೀರ್ಥ ಜೋಶಿ “ಮೋಳಿಗೆ ಮಾರಯ್ಯ” ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ. ನಿರ್ಮಾಣ,‌ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ಚಿತ್ರಕಥೆ , ಸಂಭಾಷಣೆ ಜೆ.ಎಂ.ಪ್ರಹ್ಲಾದ್ ಅವರದು. ವಿ.ಎಫ್.ಎಕ್ಸ್ ದಯಾನಂದ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ಮಧುಸೂದನ್ ಹವಾಲ್ದಾರ್ ತಿಳಿಸಿದರು.

ನಾನು ಮಧುಸೂದನ್ ಹವಾಲ್ದಾರ್ ಅವರ ಹಿಂದಿನ ಮೂರು ಚಿತ್ರಗಳಲ್ಲೂ ವೆಂಜಟರಮಣ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೆ. ಈ ಚಿತ್ರದಲ್ಲಿ ಅವರು ನನಗೆ “ಮೋಳಿಗೆ ಮಾರಯ್ಯ” ಅವರ ಪಾತ್ರ ನೀಡಿದ್ದಾರೆ ಎಂದರು ನಟ ವಿಷ್ಣುತೀರ್ಥ ಜೋಶಿ. ಚಿತ್ರಕಥೆ, ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್, ವಿ.ಎಫ್.ಎಕ್ಸ್ ದಯಾನಂದ್ ಹಾಗೂ ಸೌಂಡ್ ಆಫ್ ಮ್ಯೂಸಿಕ್ ಗುರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಹೆಡ್ ಕಾನ್​​ಸ್ಟೇಬಲ್ ಕಿಡ್ನಾಪ್​ ಮಾಡಿ ಪೊಲೀಸರಿಂದಲೇ ಮಾರಣಾಂತಿಕ ಹಲ್ಲೆ – ಗೋವಿಂದರಾಜನಗರ ಸಬ್ ಇನ್ಸ್​ಪೆಕ್ಟರ್ ಗುರುಪ್ರಸಾದ್ ಕರ್ಮಕಾಂಡ!

Btv Kannada
Author: Btv Kannada

Read More