ಮಂಗಳೂರು : ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು, ಹಿಂದೂಪರ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. 2022ರಲ್ಲಿ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮತ್ತು ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ಗುರುವಾರ ರಾತ್ರಿ 8.27ರ ಸುಮಾರಿಗೆ ಮಂಗಳೂರಿನ ಹೊರವಲಯದ ಬಜ್ಪೆ ಠಾಣೆ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಕಾರ್ಯಕರ್ತರಾಗಿದ್ದರು ಮತ್ತು ಅವರ ವಿರುದ್ಧ ಹಲವು ಕೊಲೆ ಪ್ರಯತ್ನದ ಪ್ರಕರಣಗಳು ದಾಖಲಾಗಿದ್ದವು. ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ 2022ರ ಜುಲೈ 28ರಂದು ಫಾಜಿಲ್ನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದರು.
ಇದೀಗ ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲಾಗಿದೆ. ಘಟನೆ ಬಳಿಕ ಸುಹಾಸ್‌ನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಸುಹಾಸ್ ಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಭರತ್ ಶೆಟ್ಟಿ ಕೂಡ ಭೇಟಿ ನೀಡಿದ್ದಾರೆ.
ಇನ್ನು ಆಸ್ಪತ್ರೆ ಎದುರು ಭಾರೀ ಸಂಖ್ಯೆಯಲ್ಲಿ ನಿನ್ನೆ ರಾತ್ರಿ ಹಿಂದೂ ಕಾರ್ಯಕರ್ತರು ಸೇರಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಮಂಗಳೂರು ಹಲವೆಡೆ ನಾಕಾಬಂದಿ :ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳೂರು ಹಲವೆಡೆ ನಾಕಾಬಂದಿ ಹಾಕಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ಇಡೀ ಗಸ್ತು ತಿರುಗಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ಮಂಗಳೂರು ನಗರಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾಕಂದ್ರೆ ಕೊಲೆಯಾದ ಸುಹಾಸ್ ಸ್ಥಳೀಯವಾಗಿ ಸಾಕಷ್ಟು ಕಾರ್ಯಕರ್ತರ ಪಡೆಯನ್ನು ಹೊಂದಿದ್ದ. ಹೀಗಾಗಿ ಪೊಲೀಸರು ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ.
ಕ್ಯಾಮೆರಾದಲ್ಲಿ ಭೀಕರ ದಾಳಿ ಸೆರೆ : ಇನ್ನು ಸುಹಾಶ್ ಶೆಟ್ಟಿಯನ್ನು ದುಷ್ಕರ್ಮಿಗಳ ಅಟ್ಟಾಡಿಸಿ ಕೊಲೆಗೈದ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋವನ್ನು ಬಿಜೆಪಿ ನಾಯಕ ಸುನಿಲ್ ಕುಮಾರ್ ಕಾರ್ಕಳ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ : ದ್ವಿಭಾಷೆಯಲ್ಲಿ ನಿರ್ಮಾಣವಾದ “ಶೇಷ 2016” ಚಿತ್ರದ ಟೀಸರ್ ರಿಲೀಸ್!
