ಬನಶಂಕರಿ ದೇವಸ್ಥಾನದಲ್ಲಿ “ಸಿಂಧೂರಿ” ಚಿತ್ರಕ್ಕೆ ಚಾಲನೆ.. ಮುಖ್ಯಪಾತ್ರದಲ್ಲಿ ರಾಗಿಣಿ ದ್ವಿವೇದಿ-ಧರ್ಮ ಕೀರ್ತಿರಾಜ್ ನಟನೆ!

ರಾಗಿಣಿ ದ್ವಿವೇದಿ ಮತ್ತು ಧರ್ಮ ಕೀರ್ತಿರಾಜ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “ಸಿಂಧೂರಿ” ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರು ನಗರದ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಅಕ್ಷಯ ತೃತೀಯದ ಶುಭದಿನದಂದು ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹಾಗೂ ಸಾಕಷ್ಟು ಗಣ್ಯರು ಉಪಸ್ಥಿತರಿದ್ದರು. ಸಿಂಧೂರಿ ಚಿತ್ರವನ್ನು ಎಸ್ ರಮೇಶ್(ಬನಶಂಕರಿ) ನಿರ್ಮಾಣ ಮಾಡಿದ್ದು, ಶಂಕರ್ ಕೋನಮಾನಹಳ್ಳಿ ನಿರ್ದೇಶಿಸಿದ್ದಾರೆ.

ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರು, ನಿರ್ದೇಶಕನಾಗಿ ಇದು ನನಗೆ ನಾಲ್ಕನೇ ಚಿತ್ರ, ಮೇ 10 ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಸಕಲೇಶಪುರ ಮುಂತಾದ ಕಡೆ 45 ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಶೀರ್ಷಿಕೆ ಕೇಳಿದರೆ, ರೋಹಿಣಿ ಸಿಂಧೂರಿ ಮತ್ತು ಡಿ.ಕೆ. ರವಿ ಅವರ ಕಥೆಯಾ? ಎಂದು ಹಲವರು ಕೇಳಿದ್ದಾರೆ. ಆದರೆ ರೋಹಿಣಿ ಸಿಂಧೂರಿ ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಕಥೆ. ಇದೊಂದು ಮರ್ಡರ್ ಮಿಸ್ಟ್ರಿ. ಇಲ್ಲಿ ರಾಗಿಣಿ ಮತ್ತು ಧರ್ಮ ಕೀರ್ತಿರಾಜ್ ಜೋಡಿಯಾಗಿ ನಟಿಸುತ್ತಿಲ್ಲ. ರಾಗಿಣಿ ಅವರು ಕಥೆಗೆ ಟರ್ನಿಂಗ್‍ ಪಾಯಿಂಟ್‍ ನೀಡುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಾನು ‘ಬಿಂಗೋ’ ಚಿತ್ರದ ಚಿತ್ರೀಕರಣ ಮಾಡುವಾಗ, ರಾಗಿಣಿ ಅವರಿಗೆ ನನ್ನ ಕೆಲಸ ಇಷ್ಟವಾಗಿ, ಜೊತೆಯಾಗಿ ಇನ್ನೊಂದು ಸಿನಿಮಾ ಮಾಡೋಣ ಎಂದರು. ಆ ಸಂದರ್ಭದಲ್ಲಿ ಒಂದು ಕಥೆ ಹೇಳಿದೆ. ಅವರಿಗೆ ಇಷ್ಟವಾಗಿ ಈ ಚಿತ್ರ ಮಾಡೋಣ ಎಂದರು. ಚಿತ್ರಕಥೆ ಬರೆದೆ, ನಿರ್ಮಾಪಕರಿಗೂ ಓಕೆ ಆಯಿತು. ಇಂದು ಚಿತ್ರ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಧರ್ಮ ಅವರು ಚಾಕಲೇಟ್ ಬಾಯ್‍ ಆಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರದ್ದು ವಿರುದ್ಧವಾದ ಪಾತ್ರ. ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಚಿತ್ರದ ನಾಯಕಿ ಹಾಗೂ ಉಳಿದ ತಾರಾಬಳಗದ ಬಗ್ಗೆ ಸದ್ಯದಲ್ಲೇ ತಿಳಿಸುತ್ತೇವೆ ಎಂದರು.

ಏಳೆಂಟು ವರ್ಷಗಳ ಹಿಂದೆ ‘ವಿಕ್ಕಿ’ ಎಂಬ ಚಿತ್ರ ಮಾಡಿದ್ದೆ. ನಿರ್ದೇಶಕರು ಮೋಸ ಮಾಡಿ ಹೋದರು. ಕೊನೆಗೆ ನಾನು ಚಿತ್ರ ಮುಗಿಸಿ ಬಿಡುಗಡೆ ಮಾಡಿದೆ. ಮುಂದೆ ಚಿತ್ರ ಮಾಡಬಾರದು ಎಂದು ನಿರ್ಧರಿಸಿದ್ದೆ. ಶಂಕರ್ ಬಂದು ಕಥೆ ಹೇಳಿದರು. ಬನಶಂಕರಮ್ಮನ ಆಶೀರ್ವಾದದಿಂದ ಒಂದೊಳ್ಳೆಯ ದಿನದಂದು ಚಿತ್ರ ಪ್ರಾರಂಭಿಸಿದ್ದೇನೆ ಎಂದು ನಿರ್ಮಾಪಕ ಎಸ್ ರಮೇಶ್ (ಬನಶಂಕರಿ) ತಿಳಿಸಿದರು.

ಚಿತ್ರಕ್ಕೆ ಇಂದು ಒಳ್ಳೆಯ ಆರಂಭ ಸಿಕ್ಕಿದೆ, ಮಹಿಳಾ ಪ್ರಧಾನ ಚಿತ್ರ ಮಾಡುವುದು ಸವಾಲಿನ ಕೆಲಸ. ಜನರನ್ನು ಚಿತ್ರಮಂದಿರಗಳಿಗೆ ಕರೆತರುವುದು ಕಷ್ಟ. ಹೀಗಿರುವಾಗ, ಒಂದು ವಿಭಿನ್ನ ಕಥೆಗಾಗಿ ಎಲ್ಲರೂ ಹುಡುಕಾಟದಲ್ಲಿದ್ದಾರೆ. ಇವತ್ತಿನ ಟ್ರೆಂಡ್‍ಗೆ ಚಿತ್ರ ಮಾಡಬೇಕೆಂದರೆ ಮೊದಲು ನಾವು ಬದಲಾಗಬೇಕು. ಈ ಚಿತ್ರದ ಕಥೆ ಅಸಾಧಾರಣವಾಗಿದೆ ಅಂತಲ್ಲ. ವಿಭಿನ್ನವಾಗಿದೆ. ಹೆಸರಲ್ಲೇ ಕೆಂಪು ಬಣ್ಣವಿದೆ, ಉಗ್ರವಾಗಿದೆ. ದುರ್ಗೆಯ ಶಕ್ತಿ, ಸರಸ್ವತಿಯ ಬುದ್ಧಿ, ಲಕ್ಷ್ಮಿಯ ಸಮೃದ್ಧಿ ಇದೆ. ಈ ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಮಹತ್ವವಿದೆ. ಚಿತ್ರದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಎಲ್ಲಾ ಅಂಶಗಳು ಸಹ ಇವೆ. ‘ಬಿಂಗೋ’ ಶುರುವಾದಾಗಲೇ ಈ ಚಿತ್ರದ ಬಗ್ಗೆ ಮಾತನಾಡಿಕೊಂಡಿದ್ದೆವು. ಇದೊಂದು ಆ್ಯಕ್ಷನ್‍ ಕಮರ್ಷಿಯಲ್‍ ಚಿತ್ರವಾಗಲಿದೆ ಎಂದು ರಾಗಿಣಿ ದ್ವಿವೇದಿ ಹೇಳಿದರು.

ಶೀರ್ಷಿಕೆ ಕೇಳಿದರೆ ಇದೊಂಂದು ಮಹಿಳಾ ಪ್ರಧಾನ ಚಿತ್ರ ಅಂತ ಅನಿಸುತ್ತದೆ. ನನ್ನ ಪಾತ್ರದ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ಇಲ್ಲಿ ನಾನು ಮತ್ತು ರಾಗಿಣಿ ಅವರು ಜೋಡಿಯಲ್ಲ. ನಮ್ಮಿಬ್ಬರ ನಡುವೆ ಸಾಕಷ್ಟು ಹಗ್ಗಜಗ್ಗಾಟವಿದೆ. ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ ಎಂದು ತಮ್ಮ ಪಾತ್ರದ ಬಗ್ಗೆ ನಟ ಧರ್ಮ ಕೀರ್ತಿರಾಜ್ ತಿಳಿಸಿದರು.

ನಟ ನಾರಾಯಣಸ್ವಾಮಿ, ರಮೀಜ್ ರಾಕಿ, ಛಾಯಾಗ್ರಾಹಕ ರಾಕೇಶ್‍ ಸಿ ತಿಲಕ್, ಸಂಗೀತ ನಿರ್ದೇಶಕ ಹಿತನ್ ಹಾಸನ್‍ ಹಾಗೂ ಸಂಭಾಷಣೆ ಬರೆಯುತ್ತಿರುವ ಹರೀಶ್‍ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : JDS ಭದ್ರಕೋಟೆಯಲ್ಲೇ HD ರೇವಣ್ಣಗೆ ಮುಖಭಂಗ – ಹಾಸನ ನಗರಸಭೆ ಅಧ್ಯಕ್ಷರ ಅವಿಶ್ವಾಸ ಮಂಡನೆಯಲ್ಲಿ ಸೋಲು!

Btv Kannada
Author: Btv Kannada

Read More