ರಾಜ್ಯಾದ್ಯಂತ ಚಂಡಮಾರುತ ಪ್ರಸರಣ : ಮೇ. 6ರವರೆಗೆ ಭಾರೀ ಮಳೆ ಮುನ್ಸೂಚನೆ!

ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನಕ್ಕೆ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಚಂಡಮಾರುತದ ಪ್ರಸರಣ ಉಂಟಾಗಿದೆ. ಇದರ ಪ್ರಭಾವದಿಂದ ರಾಜ್ಯ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಮೇ 6 ಭರ್ಜರಿ ಮಳೆ ಆಗುವ ನಿರೀಕ್ಷೆಗಳು ಇವೆ. ತಾಪಮಾನದಲ್ಲಿ ಇನ್ನಷ್ಟು ಬದಲಾವಣೆ ಸಾಧ್ಯತೆ ಇದೆ ಎನ್ನಲಾಗಿದೆ.

ಚಂಡಮಾರುತದ ಪ್ರಸರಣದ ಅಪ್ಡೇಟ್ ಮಾಹಿತಿ ನೋಡುವುದಾದರೆ ವಾಯುವ್ಯ ಮಧ್ಯಪ್ರದೇಶ ಮತ್ತು ನೆರೆಹೊರೆಗಳ ಪ್ರದೇಶ, ತಮಿಳುನಾಡಿನ ದಕ್ಷಿಣ ಭಾಗ, ಮರಾಠವಾಡ, ಕರ್ನಾಟಕದ ಒಳನಾಡಿಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಉಂಟಾಗಿರುವ ಚಂಡಮಾರುತದ ಪರಿಚಲನೆಯ ಪ್ರಭಾವ ಬೀರಿದೆ.

ಇದಷ್ಟೇ ಅಲ್ಲದೇ ಲಕ್ಷದ್ವೀಪ ಹಾಗೂ ಅದರ ಆಸುಪಾಸಿನಲ್ಲಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಚಂಡಮಾರುತ ಪ್ರಸರಣವಿದೆ. ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಗಳ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಸಹ ತೀವ್ರ ಬಿರುಗಾಳಿ ಬೀಸುತ್ತಿದೆ. ಇದರ ಪ್ರಭಾವದಿಂದ ದಕ್ಷಿಣ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದೆ.

ಮುಂದಿನ ಐದಾರು ದಿನಗಳ ಪೈಕಿ ಮುಂದಿನ 03 ದಿನ (ಮೇ 1-3) ಬೆಂಗಳೂರು ನಗರ, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಬರಬಹುದು ಎನ್ನಲಾಗಿದೆ. ನಂತರ ಮೂರು ದಿನ ಭರ್ಜರಿ ಮಳೆ ಆರ್ಭಟ ಕಂಡು ಬರಲಿದೆ. ಗುಡುಗು ಮಿಂಚು ಸಹಿತ ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.

ಮೇ 6ರವರೆಗೆ ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಚಿತ್ರದುರ್ಗ, ಮಂಡ್ಯ ಸೇರಿದಂತೆ ಈ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ ಉತ್ತರ ಒಳನಾಡಿನ ಗದಗ, ಬೀದರ್, ರಾಯಚೂರು, ವಿಜಯಪುರ, ಯಾದಗಿರಿ, ಹಾವೇರಿ, ಬೆಳಗಾವಿ, ಧಾರವಾಡ, ಬಾಗಲಕೋಟೆಗಳಲ್ಲಿ ಆಗಾಗ ಲಘು ಮಳೆ ಬರುವ ಲಕ್ಷಣಗಳು ಇವೆ. ಉಳಿದಂತೆ ಈ ಭಾಗದಲ್ಲಿ ಒಣಹವೆ ಮುಂದುವರಿಯಲಿದೆ. ದಕ್ಷಿಣ ಒಳನಾಡು, ಮಲೆನಾಡು ಭಾಗದಲ್ಲಿ ತಾಪಮಾನದಲ್ಲಿ ಆದ ಇಳಿಕೆ, ಬದಲಾವಣೆಯಂತೆ ಉತ್ತರ ಒಳನಾಡಿನಲ್ಲಿ ಆಗದು. ಇಲ್ಲಿ ಶುಷ್ಕ ವಾತಾವರಣ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ.

ಇದನ್ನೂ ಓದಿ : ಮುತ್ಸದ್ದಿ‌ ನಾಯಕ ಎಸ್.ಎಂ ಕೃಷ್ಣ ಹೆಸರಲ್ಲಿ 8 ದತ್ತಿ ನಿಧಿ ಸ್ಥಾಪನೆ!

Btv Kannada
Author: Btv Kannada

Read More