ಆಂಧ್ರಪ್ರದೇಶ : ವಿಶಾಖಪಟ್ಟಣದ ಪ್ರಸಿದ್ದ ಸಿಂಹಾಚಲಂ ದೇಗುಲದ ‘ಚಂದನ ಉತ್ಸವ’ ಸಂದರ್ಭದಲ್ಲಿ ಭಾರೀ ದುರಂತ ಸಂಭವಿಸಿದೆ. ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ಮೇಲೆ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದ ಪರಿಣಾಮ 8ಕ್ಕೂ ಹೆಚ್ಚು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ.
ಸಿಂಹಾಚಲಂ ದೇಗುಲದ ಹೊರಬದಿ ಸಿಂಹಗಿರಿ ಬಸ್ ನಿಲ್ದಾಣದಿಂದ ಹೋಗುವ ಮಾರ್ಗದಲ್ಲಿ ಹೊಸ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಲಾಗುತ್ತಿದೆ. ಅದರ 20 ಅಡಿ ಗೋಡೆ ಏಕಾಏಕಿ ಕುಸಿದು ಭಕ್ತರ ಮೇಲೆ ಬಿದ್ದಿದೆ. ಗುಡುಗು, ಮಿಂಚು ಸಹಿತ ಭಾರೀ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ NDRF ಟೀಂ, ಇತರೆ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಭಕ್ತರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳ ಕೂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಮೃತದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಹೆಚ್ಚಿನ ಭಕ್ತರು ಇರುವ ಅನುಮಾನ ವ್ಯಕ್ತವಾಗಿದೆ. ಸದ್ಯ 10ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳದಲ್ಲಿ ಬೀಡುಬಿಟ್ಟಿವೆ.
ಸಿಂಹಾಚಲಂ ದೇಗುಲದಲ್ಲಿ ವರ್ಷಕ್ಕೊಮ್ಮೆ ಅಪ್ಪಣ್ಣ ಚಂದನೋತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವರ ಉತ್ಸವಕ್ಕೆ ಬರುತ್ತಾರೆ. ಇವತ್ತು 2 ಲಕ್ಷಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಅಂದಾಜು ಇತ್ತು. ಮಧ್ಯರಾತ್ರಿಯಿಂದಲೇ ಭಕ್ತರು ಹರಿದು ಬಂದಿದ್ದರು. ನಿನ್ನೆ ಮಧ್ಯಾಹ್ನ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು.
ಇದನ್ನೂ ಓದಿ : ಟಾರ್ಗೆಟ್, ಟೈಂ ನೀವೇ ನಿರ್ಧರಿಸಿ – ಉಗ್ರರನ್ನು ಹೊಡೆದುರುಳಿಸಲು ಸೇನೆಗೆ ಪರಮಾಧಿಕಾರ ಕೊಟ್ಟ ಪ್ರಧಾನಿ ಮೋದಿ!
