ಬೆಂಗಳೂರು : ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಅಧಿವೇಶನದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿಯ ಸದಸ್ಯರುಗಳು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರುವಂತೆ ನಡೆದುಕೊಂಡಿದ್ದಾರೆ ಎಂದು 18 ಮಂದಿ ಬಿಜೆಪಿ ಶಾಸಕರನ್ನು ಸದನದ ಕಲಾಪದಿಂದ ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶ ಹೊರಡಿಸಿದ್ದರು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಧ್ಯೆ ಪ್ರವೇಶಿಸಿದ್ದು, ಅಮಾನತು ಆದೇಶ ರದ್ದುಗೊಳಿಸುವಂತೆ ಸ್ಪೀಕರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ಸೂಚಿಸಿದ್ದಾರೆ.
18 ಮಂದಿ ಬಿಜೆಪಿ ಶಾಸಕರನ್ನು ಸದನದ ಕಲಾಪದಿಂದ ಅಮಾನತು ಮಾಡಿದ ಬಳಿಕ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಅಮಾನತು ವಾಪಾಸ್ ಪಡೆಯಲು ಮಾರ್ಗದರ್ಶನ ಮಾಡಿ ಎಂದು ಮನವಿ ಮಾಡಿದ್ದರು. ಮನವಿ ಬೆನ್ನೆಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಎಂಟ್ರಿ ಕೊಟ್ಟಿದ್ದು, ಬಿಜೆಪಿ ನಾಯಕರ ದೂರನ್ನ ಉಲ್ಲೇಖಿಸಿ ಸ್ಪೀಕರ್ ಖಾದರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ 18 ಬಿಜೆಪಿ ಶಾಸಕರ ಅಮಾನತು ಆದೇಶ ರದ್ದುಗೊಳಿಸಿ ಎಂದಿರುವ ರಾಜ್ಯಪಾಲರು, ಅಮಾನತು ವಿಷಯದಲ್ಲಿ ತೆಗೆದುಕೊಂಡ ಕ್ರಮಗಳ ವಿವರಗಳನ್ನು ನನಗೆ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಗರ್ವನರ್ ಪತ್ರದ ಸಾರಂಶ : ವಿಧಾನಸಭೆ ವಿಪಕ್ಷ ನಾಯಕರು ಹಾಗೂ ಸದಸ್ಯರು ನನ್ನನ್ನು ಭೇಟಿ ಮಾಡಿದ್ದರು. ಕರ್ನಾಟಕ ವಿಧಾನಸಭೆಯ 18 ಸದಸ್ಯರ ಅಮಾನತು ಆದೇಶವನ್ನು ರದ್ದುಗೊಳಿಸುವ ಬಗ್ಗೆ ದೂರು ನೀಡಿದ್ದಾರೆ. ವಿರೋಧ ಪಕ್ಷಕ್ಕೆ ಸೇರಿದ 18 ಸದಸ್ಯರ ಮೇಲೆ ವಿಧಿಸಲಾದ ಅಮಾನತು ಆದೇಶವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ವಿಧಾನಸಭೆಯ ಸ್ಪೀಕರ್ಗೆ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ವಿನಂತಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನ ಎತ್ತಿಹಿಡಿಯಬೇಕಿದೆ. ಅಮಾನತುಗೊಂಡ ಸದಸ್ಯರು ಜನಪ್ರತಿನಿಧಿಗಳಾಗಿ ತಮ್ಮ ಜವಾಬ್ದಾರಿಗಳನ್ನು ಪುನರಾರಂಭಿಸಲು ಅವಕಾಶ ಮಾಡಿಕೊಡಬೇಕು. ಅವರ ವಿನಂತಿಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ನಾನು ಬಯಸುತ್ತೇನೆ. ವಿಧಾನಸಭೆಯ 18 ಸದಸ್ಯರ ಅಮಾನತು ರದ್ದುಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ ಹಾಗೂ ತೆಗೆದುಕೊಂಡ ಕ್ರಮಗಳ ವಿವರಗಳನ್ನು ನನಗೆ ತಿಳಿಸಬೇಕು ಎಂದು ಪತ್ರದಲ್ಲಿ ಗರ್ವನರ್ ಉಲ್ಲೇಖಿಸಿದ್ದಾರೆ.
ಅಮಾನತುಗೊಂಡ ಶಾಸಕರು : ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ಸಿ ಎನ್ ಅಶ್ವಥ್ ನಾರಾಯಣ್, ಎಸ್ ಆರ್ ವಿಶ್ವನಾಥ್, ಬಿ ಎ ಬಸವರಾಜು, ಎಂ ಆರ್ ಪಾಟೀಲ್, ಚನ್ನಬಸಪ್ಪ, ಬಿ ಸುರೇಶ್ ಗೌಡ, ಉಮಾನಾಥ ಕೋಟ್ಯಾನ್, ಶರಣು ಸಲಗರ, ಡಾ ಶೈಲೇಂದ್ರ ಬೆಲ್ದಾಳೆ, ಸಿ ಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಡಿ. ಲಮಾಣಿ, ಮುನಿರತ್ನ ಮತ್ತು ಬಸವರಾಜ ಮತ್ತಿಮೂಡ್ ಅಮಾನತುಗೊಂಡಿದ್ದಾರೆ.
ಇದನ್ನೂ ಓದಿ : ಸುಪ್ರೀಂ ಕೋರ್ಟ್ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿಆರ್ ಗವಾಯಿ ನೇಮಕ!
