ಬೆಂಗಳೂರು : ರಾಜ್ಯದಲ್ಲಿ ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ನೇಮಕಾತಿ ಆದೇಶ ಪತ್ರ ವಿತರಿಸಿದ್ರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಆದೇಶ ಪತ್ರ ವಿತರಣೆ ಮಾಡಲಾಯ್ತು. ಕಾರ್ಯಕ್ರಮದಲ್ಲಿ ನೂತನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಿಎಂ ಕಿವಿಮಾತು ಹೇಳಿದರು.
ವ್ಯವಸಾಯ ಲಾಭದಾಯಕ ಕೆಲಸ ಅಲ್ಲ, ಅನ್ನದಾತರ ಜೊತೆ ಕೆಲಸ ಮಾಡ್ತಿದ್ದೇವೆ ಎಂಬ ಅರಿವು ನಿಮಗಿರಬೇಕು. ನಾಡಿಗೆ ನಾನು ಏನು ಮಾಡಿದ್ದೇನೆ ಎಂದು ಅರಿವು ನಿಮಗಿರಲಿ. ಈಗ ಭೂಮಿ ಬೀಟ್ ಎಂಬ ಕಾರ್ಯಕ್ರಮ ಇದೆ. ಬಿಎಸ್ಸಿ ಆದ್ಮೇಮೆ ವ್ಯವಸಾಯ ಮಾಡೋದಕ್ಕೆ ನಮ್ಮ ಊರಿಗೆ ಹೋಗಿದ್ದೆ. ಲಾ ಸೇರೋದಕ್ಕು ಮೊದಲೇ ವ್ಯವಸಾಯ ಮಾಡ್ತಿದ್ದೆ. ನಮ್ಮ ಪಕ್ಕದ ಜಮೀನಿನವನು ಎರಡು ಅಡಿ ಅತಿಕ್ರಮಣ ಮಾಡಿಕೊಂಡಿದ್ದ. ಆಮೇಲೆ ಅವನದ್ದು ಸೇರಿ ಮೂರು ಅಡಿ ಅತಿಕ್ರಮಣ ಮಾಡಿಬಿಟ್ಟಿದ್ದೆ. ಆಮೇಲೆ ನನ್ನ ಮೇಲೆ ಜಗಳ ಮಾಡಿ ಪಂಚಾಯತಿ ಮಾಡಿದ್ರು, ನನ್ನದೆ ತಪ್ಪು ಅಂತ ಮಾಡಿಬಿಟ್ಟರು ಆಗ ಊರು ಬಿಟ್ಟುಬಿಟ್ಟೆ. ಕೆಲವರಿಗೆ ಪಕ್ಕದ ಜಮೀನು ಅತಿಕ್ರಮಣ ಮಾಡೋದು ಚಟ ಆಗಿದೆ, ಅದನ್ನ ಮಾಡದೆ ಹೊದ್ರೆ ನಿದ್ದೆ ಬರೋಲ್ಲಾ ಕೆಲವರಿಗೆ. ನನ್ನ ಜೀವನದ ಅನುಭವ ಇದು, ಎಚ್ಚರಿಕೆ ವಹಿಸಿ ರೈತರ ಅಗತ್ಯತೆಗಳನ್ನ ಪೂರೈಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಿಮಗೆ ಎಲ್ಲರಿಗೂ ಶುಭವಾಗಲಿ, ಇಲ್ಲಿಗೆ ಬಂದವರು ಸೆಲೆಕ್ಟ್ ಆಗಿರೋರು ಕೆಲವರು ಮದುವೆಯಾಗಿರಬೇಕು. ಈಗ ನಿಮಗೆ ಡಿಮ್ಯಾಂಡ್ ಜಾಸ್ತಿ ಆಗುತ್ತೆ. ಸರ್ಕಾರಿ ಕೆಲಸ ಸಿಗಲಿ ಎಂಬ ಭಾವನೆ ಇದೆ, ಸರ್ಕಾರಿ ಕೆಲಸದಲ್ಲಿ ಹೇಳೊರು ಇಲ್ಲ ಕೇಳೊರು ಇಲ್ಲ ಅನ್ನೋ ಭಾವನೆ ಇದೆ. ಆ ಭಾವನೆಯನ್ನ ನೀವೆಲ್ಲಾ ತೊಡೆದುಹಾಕಬೇಕು ಎಂದು ಸಿಎಂ ಹೇಳಿದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ, ತರೀಕೆರೆ ಶಾಸಕ ಶ್ರೀನಿವಾಸ್ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ : ಮಂಡ್ಯದ ವಿ.ಸಿ. ನಾಲೆಯಲ್ಲಿ ಮತ್ತೊಂದು ದುರಂತ – ಪತ್ತೆಯಾದ ಕಾರಿನಲ್ಲಿತ್ತು ಮೂರು ಶವ.. ಅವಘಡವೋ, ಆತ್ಮಹತ್ಯೆಯೋ?
