ನವದೆಹಲಿ : ಭಾರತದ ವಿರುದ್ಧ ಯುದ್ಧಕ್ಕೆ ತಯಾರಾದಂತೆ ಪೋಸ್ ಕೊಡುತ್ತಿರುವ ಪಾಕಿಸ್ತಾನಕ್ಕೆ ಅಲ್ಲಿನ ಸೈನಿಕರೇ ಶಾಕ್ ನೀಡುತ್ತಿದ್ದಾರೆ. ಭಾರತದಲ್ಲಿನ ಸಶಸ್ತ್ರ ಬಲ ಮತ್ತು ಸೈನಿಕರ ಬಲ ಪಾಕಿಸ್ತಾನದ ನಿದ್ದೆಗೆಡಿಸಿದ್ದು, ಏಕಾಏಕಿ ಪಾಕ್ ಸೇನೆಯ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು 500ಕ್ಕೂ ಹೆಚ್ಚು ಸೈನಿಕರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಪಾಕಿಸ್ತಾನಿ ಸೇನೆಯಲ್ಲಿ ದೊಡ್ಡ ಪ್ರಮಾಣದ ದಂಗೆಯ ಪರಿಸ್ಥಿತಿ ಉದ್ಭವಿಸಿದೆ. ಸೇನಾ ಕಮಾಂಡರ್‌ಗಳಿಂದ ಆಗಾಗ್ಗೆ ಬದಲಾಗುತ್ತಿರುವ ಆದೇಶಗಳು, ಮಾನಸಿಕ ಆಯಾಸ ಮತ್ತು ಕುಟುಂಬದ ಒತ್ತಡದಿಂದಾಗಿ, 100ಕ್ಕೂ ಹೆಚ್ಚು ಸೇನಾ ಅಧಿಕಾರಿಗಳು ಮತ್ತು 500ಕ್ಕೂ ಹೆಚ್ಚು ಸೈನಿಕರು ರಾಜೀನಾಮೆ ನೀಡಿದ್ದಾರೆ. ಈ ಸಾಮೂಹಿಕ ರಾಜೀನಾಮೆಯು ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯನ್ನು ತೀವ್ರ ಬಿಕ್ಕಟ್ಟಿಗೆ ಸಿಲುಕಿಸಿದೆ.
ಭಾರತ-ಪಾಕಿಸ್ತಾನ ಗಡಿಯ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ 11ನೇ ದಳದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಮರ್ ಅಹ್ಮದ್ ಬುಖಾರಿ ಅವರು ಸೇನಾ ಪ್ರಧಾನ ಕಚೇರಿಗೆ ಪತ್ರ ಬರೆದು ಈ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಪಾಕಿಸ್ತಾನಿ ಸೇನೆಯ ಮೇಲೆ ಭಾರೀ ಒತ್ತಡವನ್ನು ಉಂಟುಮಾಡುತ್ತಿದೆ ಎಂದಿದ್ದಾರೆ.

ರಾಜೀನಾಮೆ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಪಾಕ್ ಸೇನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಸೇನೆಯ ನಿಯಮವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಪಾಕಿಸ್ತಾನ ಸೇನಾ ಕಾಯ್ದೆ(1952) ಅಡಿ ಕ್ರಮ ಜರುಗಿಸಲಾಗುವುದು ಎಂದು ವಾರ್ನಿಂಗ್ ನೀಡಿದ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.







