ಉನ್ನತ ಹುದ್ದೆಗೆ ಐಪಿಎಸ್​​ಗಳಲ್ಲಿ ಭಾರೀ ಪೈಪೋಟಿ – ರಾಜ್ಯದ ನೂತನ ಡಿಜಿಪಿಯಾಗಿ ಎಂ.ಎ.ಸಲೀಂ ನೇಮಕ ಸಾಧ್ಯತೆ!

ಬೆಂಗಳೂರು : ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಅಲೋಕ್ ಮೋಹನ್ ಅವರ ಸೇವಾ ಅವಧಿ ಈ ತಿಂಗಳು ಅಂತ್ಯವಾಗಲಿದ್ದು, ಮುಂದಿನ ಕರ್ನಾಟಕ ಡಿಜಿಪಿಯಾಗಿ ಹಿರಿಯ IPS ಅಧಿಕಾರಿ ಡಾ.ಎಂ.ಎ.ಸಲೀಂ ಅವರು ನೇಮಕವಾಗುವ ಸಾಧ್ಯತೆ ಹೆಚ್ಚಾಗಿದೆ. ಇದರೊಂದಿಗೆ ಅನೇಕ ವರ್ಷಗಳ ನಂತರ ಕನ್ನಡದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಡಿಜಿಪಿ ಹುದ್ದೆ ಅಲಂಕರಿಸುವ ಅವಕಾಶ ದೊರೆಯುವ ನಿರೀಕ್ಷೆ ಇದೆ.

ಹಿರಿಯ IPS ಅಧಿಕಾರಿ ಡಾ.ಎಂ.ಎ.ಸಲೀಂ
ಸಿಐಡಿ ಡಿಜಿಪಿ ಎಂ.ಎ.ಸಲೀಂ

ಆದರೆ, ಸೇವಾ ಹಿರಿತನ ಹೊಂದಿರುವ ಪ್ರಶಾಂತ್ ಕುಮಾರ್ ಠಾಕೂರ್ ಏನಾದರೂ ಕೋರ್ಟ್ ಮೆಟ್ಟಲೇರಬಹುದೆಂಬ ಆತಂಕ ಸರ್ಕಾರಕ್ಕಿದೆ. ಹೀಗಾಗಿ ಸಲೀಂ ಅವರ ನೇಮಕಕ್ಕೆ ಕೊಂಚ ಹಿನ್ನಡೆಯಾಗಬಹುದು ಎಂದೂ ಹೇಳಲಾಗಿದೆ. ಈ ಮಧ್ಯೆ, ಹಾಲಿ ಪೊಲೀಸ್ ಮಹಾನಿರ್ದೇಶಕರಾದ ಡಾ.ಅಲೋಕ್ ಮೋಹನ್ ಅವರು ತಮ್ಮ ಸೇವೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ್ದು, ಇದನ್ನು ರಾಜ್ಯ ಸರ್ಕಾರ ಪುರಸ್ಕರಿಸಿದೆ. ಹಾಗೆಯೇ ಇದನ್ನು ಕೇಂದ್ರ ಸರಕಾರದ ಅನುಮತಿಗೂ ಕಳುಹಿಸಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿ ಪ್ರಶಾಂತ್ ಕುಮಾರ್ ಠಾಕೂರ್
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿ ಪ್ರಶಾಂತ್ ಕುಮಾರ್ ಠಾಕೂರ್

ಕೇಂದ್ರ ಸರ್ಕಾರದಿಂದ ಈತನಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದೊಮ್ಮೆ ಮುಂದಿನ ಮೂರು ದಿನಗಳಲ್ಲಿ ಅಲೋಕ್ ಮೋಹನ್ ಅವರ ಕೋರಿಕೆಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದರೆ, ಅದರ ಪ್ರಕಾರ ಸರ್ಕಾರ ನಡೆದುಕೊಂಡಿದ್ದೇ ಆದರೆ ಅವರು ಇನ್ನೂ ಮೂರು ತಿಂಗಳ ಕಾಲ ಡಿಜಿಪಿಯಾಗಿಯೇ ಇರಬಹುದು. ಸದ್ಯದ ಸನ್ನಿವೇಶದಲ್ಲಿ ಆ ಸಾಧ್ಯತೆ ಕ್ಷೀಣ ಎನ್ನಲಾಗುತ್ತಿದೆ. ಪ್ರಸ್ತುತ ರಾಜ್ಯ ರಾಜಕೀಯ ಸನ್ನಿವೇಶ, ಸರ್ಕಾರದ ನಡೆಗಳು ಹಾಗೂ ಮುಂದಿನ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಸಲೀಂ ಅವರನ್ನೇ ಡಿಜಿಪಿಯಾಗಿ ನೇಮಕ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಹಾಲಿ ಡಿಜಿಪಿ ಅಲೋಕ್​ ಮೋಹನ್​​
ಹಾಲಿ ಡಿಜಿಪಿ ಅಲೋಕ್​ ಮೋಹನ್​​

ಡಾ.ಸಲೀಂ ಅವರು ಮೂರು ದಶಕದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಲೀಂ ಅವರು ತುಮಕೂರು ಮೂಲದ ಕನ್ನಡದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ಉಡುಪಿ, ಹಾಸನ ಎಸ್‌ಪಿಯಾಗಿದ್ದರು. ಮೈಸೂರು ನಗರ ಪೊಲೀಸ್ ಆಯುಕ್ತರೂ ಆಗಿದ್ದರು. ಹಾಗೆಯೇ ಇಲಾಖೆಯ ಅನೇಕ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷ ವಾಗಿ ನಗರಗಳ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಅವರು ಮಾಡಿರುವ ಎಲ್ಲ ಯಶಸ್ವಿ ಪ್ರಯೋಗಳು ಮತ್ತು ಅವರ ಅನುಭವಗಳನ್ನು ಆಧರಿಸಿ ಸಲೀಂ ಅವರನ್ನೇ ನೇಮಿಸುವುದು ಸೂಕ್ತ ಎನ್ನುವ ಲೆಕ್ಕಾಚಾರ ಸರ್ಕಾರದ್ದಾಗಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಇದರ ಮಧ್ಯೆ, 1980ರ ದಶಕದಲ್ಲಿ ನಿಜಾಮುದ್ದೀನ್ ಅವರ ನಂತರ ಅಲ್ಪಸಂಖ್ಯಾತರ ಸಮುದಾಯದ ಅಧಿಕಾರಿಯೊಬ್ಬರಿಗೆ ಡಿಜಿಪಿ ಹುದ್ದೆ ದೊರಕಿಸಿದಂತಾಗುತ್ತದೆ. ಹಾಗೆಯೇ ದಕ್ಷತೆಗೂ ಅವಕಾಶ ನೀಡಿದಂತಾಗುತ್ತದೆ ಎನ್ನುವ ಅಭಿಪ್ರಾಯವೂ ಸರ್ಕಾರದಲ್ಲಿದೆ. ಹೀಗಾಗಿ ಕೆಲವು ವರ್ಷಗಳ ನಂತರ ಸರ್ಕಾರ ಡಿಜಿಪಿ ನೇಮಕ ವಿಚಾರದಲ್ಲಿ ಪಾಲಿಸಿಕೊಂಡು ಬಂದಿರುವ ಸೇವಾ ಹಿರಿತನ ಸಂಪ್ರದಾಯ ದಾಟಿ ಸಲೀಂ ಅವರಿಗೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ರಾಜ್ಯದ ಹಲವೆಡೆ ಇಂದಿನಿಂದ ಮತ್ತೆ ಮಳೆಯ ಅಬ್ಬರ – ಹವಾಮಾನ ಇಲಾಖೆ ಎಚ್ಚರಿಕೆ!

 

 

Btv Kannada
Author: Btv Kannada

Read More