ಮಂಡ್ಯದಲ್ಲಿ ಕಬಡ್ಡಿ ಪಂದ್ಯದ ವೇಳೆ ಘೋರ ದುರಂತ – ಪ್ರೇಕ್ಷಕರ ಗ್ಯಾಲರಿ ಕುಸಿದು ಓರ್ವ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!

ಮಂಡ್ಯ : ಮಂಡ್ಯದದಲ್ಲಿ ಕಬಡ್ಡಿ ಆಟಗಾರರನ್ನ ಹುರಿದುಂಬಿಸಲು ಬಂದಿದ್ದ ಪ್ರೇಕ್ಷಕರೇ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಮಂಡ್ಯದ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ನಿನ್ನೆ ಕಬಡ್ಡಿ ಪಂದ್ಯವನ್ನ ಆಯೋಜನೆ ಮಾಡಲಾಗಿತ್ತು. ಕಬಡ್ಡಿ ಆಟವನ್ನ ನೋಡಲು ಸಾವಿರಾರು ಜನ ಸೇರಿದ್ದರು. ಹೀಗೆ ಪಂದ್ಯ ವೀಕ್ಷಣೆ ಮಾಡುವ ವೇಳೆ ಕೃತಕವಾಗಿ ನಿರ್ಮಿಸಿದ್ದ ಪ್ರೇಕ್ಷಕರ ಗ್ಯಾಲರಿ ದಿಢೀರ್ ಕುಸಿದು ಬಿಟ್ಟಿದೆ. ಪರಿಣಾಮ ಗ್ಯಾಲರಿಯಲ್ಲಿ ಇದ್ದ ಜನರೆಲ್ಲಾ ದಪ್ ಅಂತ ಕೆಳಗಡೆ ಬಿದ್ದಿದ್ದಾರೆ.

ಈ ಘೋರ ದುರಂತದಲ್ಲಿ ಕಬಡ್ಡಿ ಪಂದ್ಯ ವೀಕ್ಷಿಸಲು ಬಂದಿದ್ದ 55 ವರ್ಷದ ಪಾಪಣ್ಣಚಾರಿ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಗ್ಯಾಲರಿ ಕುಸಿದ ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನ ತಕ್ಷಣವೇ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಮಾಹಿತಿಗಳ ಪ್ರಕಾರ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೃತ ಪಾಪಣ್ಣಚಾರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕಬ್ಬಡಿ ಆಯೋಜಕರ ವಿರುದ್ದ ಸಾರ್ವಜನಿಕರು, ಮೃತನ ಕುಟುಂಬಸ್ಥರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ. ಯಾವುದೇ ಕ್ರೀಡೆ, ಪಂದ್ಯಾವಳಿಗಳಲ್ಲಿ ಜನ ಸೇರೋದು ಸಾಮಾನ್ಯ. ಈ ವೇಳೆ ಮತ್ತೊಮ್ಮೆ ಈ ರೀತಿಯ ಘಟನೆಗಳು ಸಂಭವಿಸದಂತೆ ಕ್ರಮವಹಿಸಬೇಕಿದೆ.

ಇದನ್ನೂ ಓದಿ : ಪಾಕ್‌ ಜೊತೆ ಯುದ್ಧ ಬೇಡವೆಂದ ಸಿಎಂ ಸಿದ್ದರಾಮಯ್ಯ ಈಗ WORLD FAMOUS – ಪಾಕಿಸ್ತಾನ ಟಿವಿಯಲ್ಲಿ ಸಿದ್ದುದೇ ಸುದ್ದಿ!

Btv Kannada
Author: Btv Kannada

Read More