ಪಹಲ್ಗಾಮ್ ಹತ್ಯಾಕಾಂಡದ ತನಿಖೆ NIA ಹೆಗಲಿಗೆ – ಕೇಂದ್ರ ಗೃಹ ಇಲಾಖೆಯಿಂದ ಆದೇಶ!

ನವದೆಹಲಿ : ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ 26 ಅಮಾಯಕ ಹಿಂದೂ ಪ್ರವಾಸಿಗರ ಹತ್ಯೆಯ ತನಿಖೆಯನ್ನು ಕೇಂದ್ರ ಗೃಹ ಇಲಾಖೆಯು ರಾಷ್ಟ್ರೀಯ ತನಿಖಾ ದಳ(NIA)ಕ್ಕೆ ವಹಿಸಿ ಆದೇಶಿಸಿದೆ.

ಈ ಪ್ರಕರಣವನ್ನು ಇದುವರೆಗೆ ಜಮ್ಮುಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಈಗ ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆ ತನಿಖೆಯನ್ನು ವಹಿಸಿಕೊಳ್ಳಲಿದೆ. ಇನ್ನು ದಾಳಿಯ ಬಗ್ಗೆ NIA ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದ್ದು, ಪಹಲ್ಗಾಮ್ ದಾಳಿ ತನಿಖೆಯ ಪ್ರಕರಣದ ಡೈರಿ ಮತ್ತು ಎಫ್‌ಐಆರ್ ಅನ್ನು ಸ್ಥಳೀಯ ಪೊಲೀಸರಿಂದ ತೆಗೆದುಕೊಳ್ಳಲಿದೆ.

ಸದ್ಯ ಎನ್‌ಐಎ ತಂಡವು ಪಹಲ್ಗಾಮ್‌ನಲ್ಲಿದ್ದು, ಅಪರಾಧ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳದಲ್ಲಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದ ಪ್ರಕರಣದ ಡೈರಿ, ಎಫ್‌ಐಆರ್ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳನ್ನ ಸುಪರ್ಧಿಗೆ ಪಡೆದುಕೊಳ್ಳಲು NIA ಸಿದ್ಧತೆ ಮಾಡಿಕೊಂಡಿದೆ.

ಉಗ್ರರ ಅಟ್ಟಹಾಸಕ್ಕೆ 26 ಮಂದಿ ಬಲಿ : ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು, ವಿದೇಶಿಯರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಮಂದಿ ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿನಡೆಸಿದ ಭೀಕರ ದಾಳಿ ಇದಾಗಿದೆ.

ಇದನ್ನೂ ಓದಿ : ಇರಾನ್​ನ ಬೃಹತ್ ಬಂದರಿನಲ್ಲಿ ಭಾರೀ ಸ್ಫೋಟ – 4 ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ!

Btv Kannada
Author: Btv Kannada

Read More

Read More