ಐಶ್ವರ್ಯ ಗೌಡ ಮತ್ತು ಸಹಚರರ ಮನೆ ಮೇಲೆ ಇಡಿ ದಾಳಿ – ಗೋಲ್ಡ್ ವಂಚಕಿ 14 ದಿನ ಇಡಿ ಕಸ್ಟಡಿಗೆ!

ಬೆಂಗಳೂರು : ಮಾಜಿ ಸಂಸದ ಡಿ.ಕೆ. ಸುರೇಶ್ ಸಹೋದರಿಯ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ವಂಚನೆ ಆರೋಪ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶಾನಾಲಯವು, ಐಶ್ವರ್ಯಾ ಗೌಡ ಅವರನ್ನು ಬಂಧಿಸಿ, 14 ದಿನಗಳ ಕಸ್ಟಡಿಗೆ ತೆಗೆದುಕೊಂಡಿದೆ.

ಐಶ್ವರ್ಯ ಗೌಡ, ವಿನಯ್ ಕುಲಕರ್ಣಿ, ಶಿಲ್ಪಾ ಗೌಡ ಮನೆ ಮೇಲೆ ಪಿಎಮ್​ಎಲ್​ಎ ಅಡಿಯಲ್ಲಿ ಇಡಿ ದಾಳಿ ನಡೆಸಿದೆ. ಐಶ್ವರ್ಯ ಗೌಡ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ED ಶೋಧ ನಡೆಸಿದ್ದು, ಇಡಿ ಪರಿಶೀಲನೆ ವೇಳೆ ಚರ/ಸ್ಥಿರ ಆಸ್ತಿಗಳು ಮತ್ತು ಇತರ ಡಿಜಿಟಲ್ ಸಾಧನಗಳ ಮೂಲಕ ಐಶ್ವರ್ಯಾ ಗೌಡ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಸಾಕ್ಷ್ಯಗಳ ಜೊತೆಗೆ 2.25 ಕೋಟಿ ಹಣ ಮೊತ್ತವನ್ನು ಸಹ ಇಡಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ವಾರಾಹಿ ಜ್ಯುವೆಲ್ಲರಿ ಶಾಪ್ ಮಾಲೀಕರಾದ ವನಿತಾ ಎಸ್. ಐತಾಳ್ ಅವರಿಗೆ 9.82 ಕೋಟಿ ರೂ. ಮೌಲ್ಯದ 14.660 ಕೆ.ಜಿ ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಚಂದ್ರಾಲೇಔಟ್ ಪೊಲೀಸರು ಐಶ್ವರ್ಯಾ ಗೌಡ ಪತಿ ಹರೀಶ್​ರನ್ನು ಬಂಧಿಸಿದ್ದರು. ಅಲ್ಲದೆ, ಆರ್.ಆರ್. ನಗರ ಪೊಲೀಸ್​ ಠಾಣೆಯಲ್ಲಿ 3.25 ಕೋಟಿ ರೂ. ವಂಚನೆ ಸಂಬಂಧ ಶಿಲ್ಪಾ ಗೌಡ ನೀಡಿದ ದೂರಿನ ಮೇರೆಗೆ ಐಶ್ವರ್ಯಾ ವಿರುದ್ದ ಪ್ರಕರಣ ದಾಖಲಾಗಿತ್ತು.

ಐಶ್ವರ್ಯ ಗೌಡ ಹೆಚ್ಚಿನ ಆದಾಯದ ಭರವಸೆ ನೀಡಿ ಹಲವಾರು ವ್ಯಕ್ತಿಗಳಿಂದ ಚಿನ್ನ, ನಗದು ಮತ್ತು ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದುಕೊಂಡು, ಭರವಸೆ ನೀಡಿದ ಲಾಭವನ್ನು ನೀಡದೆ ಉನ್ನತ ರಾಜಕಾರಣಿಗಳ ಹೆಸರು ಹೇಳಿ ಹಲವರಿಗೆ ಬೆದರಿಕೆ ಹಾಕಿದ್ದರು. ಸದ್ಯ ಐಶ್ವರ್ಯ ಗೌಡ 14 ದಿನಗಳ ಕಾಲ ಇಡಿ ವಶದಲ್ಲಿದ್ದಾರೆ.

ಇದನ್ನೂ ಓದಿ : No live.. ಉಗ್ರರ ಆಪರೇಷನ್ ಲೈವ್ ಮಾಡದಂತೆ ಚಾನೆಲ್​ಗಳಿಗೆ ಆದೇಶ!

Btv Kannada
Author: Btv Kannada

Read More