ಬೆಂಗಳೂರು : ದುಬೈನಿಂದ ಚಿನ್ನ ಕಳ್ಳಸಾಗಾಣಿಕೆ ಮಾಡಿದ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ರನ್ಯಾ ರಾವ್ ಜಾಮೀನು ಅರ್ಜಿ ವಜಾ ಮಾಡಿ ಹೈಕೋರ್ಟ್ ಆದೇಶಿಸಿದೆ. ಇದರ ಜೊತೆಗೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ತರುಣ್ ರಾಜ್ ಜಾಮೀನು ಅರ್ಜಿಯನ್ನು ಕೂಡ ಹೈಕೋರ್ಟ್ ವಜಾ ಮಾಡಿದೆ.
ರನ್ಯಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. ಈ ಮೂಲಕ ಗೋಲ್ಡ್ ಸ್ಮಗ್ಲಿಂಗ್ ಗಾಳಕ್ಕೆ ಸಿಲುಕಿದ ನಟಿ ರನ್ಯಾಗೆ, ಇನ್ನೂ ಒಂದು ವರ್ಷಗಳ ಕಾಲ ಜೈಲೇ ಗತಿಯಾಗಿದೆ.
ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಶಿಫಾರಸಿನ ಮೇರೆಗೆ ನಟಿ ಮತ್ತು ಇತರ ಆರೋಪಿಗಳ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ (CEIB)COFEPOSA ಕಾಯ್ದೆಯನ್ನು ಜಾರಿಗೊಳಿಸಿದೆ. ವೃತ್ತಿಪರ ಕಳ್ಳ ಸಾಗಣಿದಾರರ ವಿರುದ್ಧ ಪ್ರಯೋಗಿಸುವ ಕಾಫಿಪೋಸಾ ಕಾಯ್ದೆಯನ್ನು ರನ್ಯಾ ತಂಡದ ಮೇಲೆ ಡಿಆರ್‌ಐ ಹೂಡಿರುವುದು ಮಹತ್ವ ಪಡೆದುಕೊಂಡಿದೆ.
ಹಿನ್ನೆಲೆ : ಕಳೆದ ಮಾರ್ಚ್‌ನಲ್ಲಿ ದುಬೈನಿಂದ 12 ಕೋಟಿ ರೂ. ಮೌಲ್ಯದ 14.1 ಕೆ.ಜಿ. ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳು ರನ್ಯಾರಾವ್‌ರನ್ನು ಡಿಆರ್‌ಐ ಬಂಧಿಸಿತ್ತು. ಬಳಿಕ ವಿಚಾರಣೆ ವೇಳೆ ಆಕೆ 43 ಕೋಟಿ ರು. ಮೌಲ್ಯಕ್ಕೂ ಮಿಗಿಲಾದ ಚಿನ್ನಾಭರಣ ಸಾಗಿಸಿರುವುದು ಪತ್ತೆಯಾಗಿತ್ತು.
ಈ ಕಳ್ಳ ಸಾಗಣೆಗೆ ನೆರವು ನೀಡಿದ್ದ ಆಕೆಯ ಸ್ನೇಹಿತ ಹಾಗೂ ಬೆಂಗಳೂರಿನ ಏಟ್ರಿಯಾ ಹೋಟೆಲ್ ಸಮೂಹದ ಮಾಲಿಕರ ಮೊಮ್ಮಗ ತರುಣ್ ಹಾಗೂ ಬಳ್ಳಾರಿ ಚಿನ್ನಾಭರಣ ವ್ಯಾಪಾರಿ ಸಾಹಿಲ್ ಜೈನ್‌ನನ್ನೂ ಡಿಆರ್‌ಐ ಬಂಧಿಸಿತ್ತು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಡಿಆರ್‌ಐ ಅಧಿಕಾರಿಗಳು, ರನ್ಯಾ ತಂಡದ ವಿರುದ್ಧ ಕಾಫಿಪೊಸಾ ಪ್ರಯೋಗಕ್ಕೆ ಕೇಂದ್ರ ಆರ್ಥಿಕ ಗುಪ್ತಚರ ಮಂಡಳಿಗೆ ಪ್ರಸ್ತಾಪನೆ ಸಲ್ಲಿಸಿದ್ದರು. ಈ ಪ್ರಸ್ತಾಪಕ್ಕೆ ಮಂಡಳಿ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಆರೋಪಿಗಳ ವಿರುದ್ಧ ಕಾಫಿಪೊಸಾ ಕಾಯ್ದೆ ಹೂಡಲಾಗಿದೆ.
ಇದನ್ನೂ ಓದಿ : ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ!
