ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕ ಸಂಪುಟ ಸಭೆ – 25ಕ್ಕೂ ಹೆಚ್ಚು ನೀರಾವರಿ ಯೋಜನೆಗಳಿಗೆ ಅನುಮೋದನೆ ಸಾಧ್ಯತೆ!

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಇದೇ ಮೊದಲ ಬಾರಿ ಐತಿಹಾಸಿಕ ಸಚಿವ ಸಂಪುಟ ಸಭೆ ಇಂದು ನಡೆಯಲಿದ್ದು, ಚಾಮರಾಜನಗರ ಸೇರಿ ಸುತ್ತಲಿನ ಜಿಲ್ಲೆಗಳಿಗೆ ಸಂಬಂಧಿಸಿದ 25ಕ್ಕೂ ಹೆಚ್ಚು ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವ ಸಾಧ್ಯತೆಗಳಿವೆ.

ಪ್ರದೇಶವಾರು ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಕಲಬುರಗಿ ನಂತರ ಇದೀಗ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ ಮೊದಲ ಬಾರಿ ಸಚಿವ ಸಂಪುಟ ಸಭೆ ನಡೆಸಲಿದೆ. ಸಭೆಯಲ್ಲಿ 70ಕ್ಕೂ ಹೆಚ್ಚಿನ ಯೋಜನೆಗಳ ಕುರಿತು ಚರ್ಚೆ ನಡೆಸಿ ಅನುಷ್ಠಾನಕ್ಕೆ ಅನುಮೋದನೆ ನೀಡುವ ಸಾಧ್ಯತೆಗಳಿವೆ. ಆ ಯೋಜನೆಗಳ ಪೈಕಿ 50ಕ್ಕೂ ಹೆಚ್ಚಿನವು ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿವೆ. ಅದರಲ್ಲೂ 29 ಯೋಜನೆಗಳು ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುವ ನೀರಾವರಿ ಯೋಜನೆಗಳಾಗಿವೆ.

ಕಬಿನಿ ಅಣೆಕಟ್ಟಿನ ಮುಂಭಾಗ ದುರಸ್ತಿ, ಪಿರಿಯಾಪಟ್ಟಣ ಏತ ನೀರಾವರಿ ಕಾಲುವೆ ಮರುವಿನ್ಯಾಸ, ಸುವರ್ಣಾವತಿ ಜಲಾಶಯದ ಎಡದಂಡೆ, ಬಲದಂಡೆ ಮತ್ತು ಉಪ ನಾಲೆಗಳ ಅಭಿವೃದ್ಧಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿವೆ.

ಬೆಳಗ್ಗೆ 11:30 ಕ್ಕೆ ಹೆಲಿಕಾಪ್ಟರ್ ಮೂಲಕ ಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಳಿಕ ಮಹದೇಶ್ವರರ ಇತಿಹಾಸ ಸಾರುವ ಮ್ಯೂಸಿಯಂ, 376 ಕೊಠಡಿಗಳ ವಸತಿ ಗೃಹ, 1 ಮೆಗಾ ವ್ಯಾಟ್ ಸೋಲಾರ್ ಪ್ಲಾಂಟ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ. ಮಧ್ಯಾಹ್ನ 12:00 ಗಂಟೆಗೆ ಸಚಿವ ಸಂಪುಟ ಸಭೆ ಆರಂಭಗೊಳ್ಳಲಿದ್ದು, ಬಳಿಕ ಪತ್ರಿಕಾಗೋಷ್ಠಿ ನಡೆಯಲಿದೆ. ಸಂಜೆ 4:00 ಗಂಟೆಗೆ ಸಿಎಂ ಅಧ್ಯಕ್ಷತೆಯಲ್ಲಿ ಮಲೆಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಲಿದೆ. ಬಳಿಕ ಮಹದೇಶ್ವರ ಬೆಟ್ಟದಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದಾರೆ.

ಚಾ.ನಗರಕ್ಕೆ 3ನೇ ಹಂತದ ಕಾವೇರಿ ನೀರು : ಚಾಮರಾಜನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕಾವೇರಿ ನದಿಯಿಂದ 3ನೇ ಹಂತದ ನೀರು ಸರಬರಾಜು ಯೋಜನೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಚಾಮರಾಜನಗರಕ್ಕೆ ಮಾಲಂಗಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ 158.24 ಕೋಟಿ ರು. ವೆಚ್ಚದಲ್ಲಿ 3ನೇ ಹಂತದ ನೀರು ಸರಬರಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆಗಳಿವೆ. ಹಾಗೆಯೇ, ಚಾಮರಾಜನಗರಕ್ಕೆ 138.31 ಕೋಟಿ ರು. ವೆಚ್ಚದಲ್ಲಿ 2ನೇ ಹಂತದ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ವಿಷಯಕ್ಕೂ ಅನುಮೋದನೆ ನೀಡುವ ಸಾಧ್ಯತೆಗಳಿವೆ.

ಉಳಿದಂತೆ ಮೈಸೂರು ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು 393.85 ಕೋಟಿ ರು. ವೆಚ್ಚದಲ್ಲಿ ವೈಟ್‌ಟ್ಯಾಪಿಂಗ್‌ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವುದು, ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ನಡೆಸಲು 92.30 ಕೋಟಿ ರು. ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ, ಮಹಾತ್ಮ ಗಾಂಧೀಜಿ ಭೇಟಿ ನೀಡಿದ ನಂಜನಗೂಡು ತಾಲೂಕಿನ ಬದನವಾಳು ಖಾದಿ ಕೇಂದ್ರದ ಸಮಗ್ರ ಅಭಿವೃದ್ಧಿ, ಮೈಸೂರಿನ ಶ್ರೀರಂಗಪಟ್ಟಣ-ಹಾಸನದ ಬೇಲೂರು, ಹಳೆಬೀಡು ಒಳಗೊಂಡ ದಕ್ಷಿಣ ಕರ್ನಾಟಕ ಪ್ರವಾಸಿ ವೃತ್ತವನ್ನು 231.78 ಕೋಟಿ ರು.ಗಳಲ್ಲಿ ಅನುಷ್ಠಾನಗೊಳಿಸುವ ವಿಚಾರಗಳು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.

ನ್ಯಾ. ಮೈಕಲ್‌ ಡಿ.ಕುನ್ಹಾ 2ನೇ ವರದಿಗೆ ಅನುಮೋದನೆ? ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್‌ ಅಕ್ರಮ ಪತ್ತೆಗೆ ರಚಿಸಲಾಗಿರುವ ನ್ಯಾ. ಮೈಕಲ್‌ ಡಿ.ಕುನ್ಹಾ ವಿಚಾರಣಾ ಆಯೋಗ ಕಳೆದ ಏ.5ರಂದು ಸಲ್ಲಿಸಿದ್ದ 2ನೇ ವರದಿಗೆ ಅನುಮೋದನೆ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಒಟ್ಟು 1,808 ಪುಟಗಳ 7 ಸಂಪುಟದ 2 ವರದಿಯು ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ್ದಾಗಿದೆ. ಅದರಲ್ಲೂ 4 ಸಂಪುಟಗಳು ಬಿಬಿಎಂಪಿಯ ದಕ್ಷಿಣ ವಲಯ, ಬೊಮ್ಮನಹಳ್ಳಿ, ಪಶ್ಚಿಮ, ಯಲಹಂಕ ವಲಯಗಳಲ್ಲಿ ನಡೆದಿರುವ ಅಕ್ರಮದ್ದಾಗಿದೆ.

ವರದಿಯಲ್ಲಿ ಬಿಬಿಎಂಪಿಯ ನಾಲ್ಕು ವಲಯಗಳು ಹಾಗೂ ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 150 ಕೋಟಿ ರು.ಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿರುವ ಕುರಿತು ಉಲ್ಲೇಖಿಸಲಾಗಿತ್ತು. ಅಲ್ಲದೆ, ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಹಿಂದಿನ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೂ ಶಿಫಾರಸು ಮಾಡಲಾಗಿದೆ. ಅದರೊಂದಿಗೆ 2020ರ ಮಾರ್ಚ್‌ನಿಂದ 2022ರ ಡಿಸೆಂಬರ್‌ವರೆಗೆ ಕೋವಿಡ್‌ 19 ಹೆಸರಿನಲ್ಲಿ ಅಕ್ರಮ ನಡೆಸಿದ ಬಿಬಿಎಂಪಿಯ ನಾಲ್ಕು ವಲಯಗಳ ಜಂಟಿ ಆಯುಕ್ತರು, ಆರೋಗ್ಯ ವಿಭಾಗದ ಅಧಿಕಾರಿಗಳು ಸೇರಿ ಇನ್ನಿತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಶಿಫಾರಸು ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ : ಇಳುವರಿ ಕುಸಿತ.. ಶತಕದತ್ತ ತೆಂಗಿನಕಾಯಿ ಬೆಲೆ – ಗ್ರಾಹಕರಿಗೆ ಭಾರೀ ಹೊರೆ!

 

 

Btv Kannada
Author: Btv Kannada

Read More