ಇಳುವರಿ ಕುಸಿತ.. ಶತಕದತ್ತ ತೆಂಗಿನಕಾಯಿ ಬೆಲೆ – ಗ್ರಾಹಕರಿಗೆ ಭಾರೀ ಹೊರೆ!

ಬೆಂಗಳೂರು : ನಗರದಲ್ಲಿ ಬಿಸಿಲಿನ ಹೆಚ್ಚಳದಿಂದ ಎಳ ನೀರಿಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ತೆಂಗಿನಕಾಯಿಯ ಕೊರತೆ ಕಂಡು ಬಂದಿದ್ದು, ಪೂರೈಕೆಯ ಕೊರತೆ ಹಾಗೂ ವಿವಿಧ ಕಾರಣಗಳಿಂದಾಗಿ ತೆಂಗಿನಕಾಯಿ ಬೆಲೆ ಶತಕದ ಸನಿಹಕ್ಕೆ ತಲುಪಿದೆ.

ಕಳೆದ ವರ್ಷ ಮಳೆ ಕಡಿಮೆಯಾಗಿ ಬರಗಾಲ ಆವರಿಸಿದ್ದರಿಂದ ಇಳುವರಿ ಕುಸಿತವಾಗಿದೆ. ಇದೇ ಕಾರಣಕ್ಕೆ ಉತ್ತಮ ಗುಣಮಟ್ಟದ ತೆಂಗಿನಕಾಯಿ ಗಗನಮುಖಿಯಾಗಿದೆ. ಎಳನೀರಿಗೆ ಉತ್ತಮ ಬೆಲೆ ಲಭ್ಯವಾಗುತ್ತಿದ್ದು, ರೈತರು ತೋಟಗಳಲ್ಲಿ ಎಳನೀರನ್ನೇ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ತೆಂಗಿನಕಾಯಿಗೆ ಕೊರತೆ ಉಂಟಾಗಿದೆ.

ನಗರದಲ್ಲಿ ತಿಂಗಳ ಹಿಂದೆ 25 ರೂ. ಇದ್ದ ತೆಂಗಿನಕಾಯಿ ಬೆಲೆ ಸದ್ಯ 65-80 ರೂ. ಆಗಿದ್ದು, ಆಹಾರ ಪದಾರ್ಥಗಳಲ್ಲಿ ತೆಂಗಿನ ಕಾಯಿ ಬಳಕೆ ಮಾಡಲು, ಪೂಜೆ ಪುನಸ್ಕಾರಗಳಿಗೆ ತೆಂಗಿನಕಾಯಿಯ ಖರೀದಿಯಷ್ಟೇ ಜನರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೆಲೆ ಏರಿಕೆಯಿಂದಾಗಿ ನಗರದಲ್ಲಿ ಹೋಟೆಲ್, ಸಭೆ ಸಮಾರಂಭದಲ್ಲಿಯೂ ತೆಂಗಿನಕಾಯಿಗಳ ಬಳಕೆ ಕಡಿಮೆಯಾಗುತ್ತಿದೆ. ಹೋಟೆಲ್ ತಿಂಡಿಗಳಲ್ಲಿ ಚಟ್ನಿಗೆ ತೆಂಗಿನಕಾಯಿಯ ಕೊರತೆ ಕಂಡು ಬರುತ್ತಿದ್ದು, ಸದ್ಯ ತೆಂಗಿನ ಕಾಯಿಯ ಕೊರತೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಬೆಂಗಳೂರಿಗೆ ತುಮಕೂರು, ಹಾಸನ ಮಂಡ್ಯದಿಂದ ತೆಂಗಿನಕಾಯಿ ಸರಬರಾಜಾಗುತ್ತದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದಲೂ ತೆಂಗಿನಕಾಯಿ ಪೂರೈಕೆಯಾಗುತ್ತಿದೆ. ಎರಡು ಮೂರು ತಿಂಗಳ ಹಿಂದೆ 20-25 ರೂ.ಗೆ ಉತ್ತಮ ತೆಂಗಿನ ಕಾಯಿ ಸಿಗುತ್ತಿತ್ತು. ಈಗ ಅದೇ ತೆಂಗಿನಕಾಯಿ ಬೆಲೆ 80 ರೂ. ಗಡಿ ದಾಟಿದೆ. ತೆಂಗಿನಕಾಯಿ ಬೆಲೆ ಇಳಿಯಲು ಬಹುಶಃ ಇನ್ನೂ ಒಂದು ತಿಂಗಳು ಕಾಯಬೇಕಾಗುತ್ತದೆ ಎಂದು ತೆಂಗಿನಕಾಯಿ ವ್ಯಾಪಾರಿಗಳು ಹೇಳುತ್ತಾರೆ.

ದರ ಏರಿಕೆಯಿಂದ ತೆಂಗಿನಕಾಯಿ ಬಳಕೆ ಕಡಿಮೆ : ಈ ಬಗ್ಗೆ ಮದುವೆ ಸಮಾರಂಭಗಳ ಕ್ಯಾಟರರ್ ಒಬ್ಬರು ಮಾತನಾಡಿ ಸಾವಿರ ಜನರಿಗೆ ಅಡುಗೆ ಮಾಡುವ ಕಡೆ ಚಟ್ನಿಗೆ 150-250 ಮತ್ತು ಅಡುಗೆಗೆ 150-200 ತೆಂಗಿನಕಾಯಿ ಬಳಸುತ್ತಿದ್ದೆವು. ಇದೀಗ ದರ ಹೆಚ್ಚಿರುವುದರಿಂದ ತೆಂಗಿನಕಾಯಿ ಬಳಕೆಯನ್ನು ಸುಮಾರು 80ರಿಂದ 100ರಷ್ಟು ಕಡಿಮೆ ಮಾಡಿದ್ದೇವೆ, ಕೇವಲ ತೆಂಗಿನಕಾಯಿ ಮಾತ್ರವಲ್ಲ ಹಾಲು, ಗ್ಯಾಸ್​, ಸಂಬಳ, ಡಿಸೇಲ್​, ಬಾಡಿಗೆ ತೆರಿಗೆ ಸೇರಿದಂತೆ ಎಲ್ಲದರ ರೇಟ್​ ಜಾಸ್ತಿಯಾಗಿದೆ. ತೆಂಗಿನಕಾಯಿ ಬಳಕೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡಿದ್ದೇವೆ. ಸಹಜವಾಗಿಯೇ ನಾವು ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ತಾಯ್ನಾಡಿಗೆ ಬಂದ ಮಂಜುನಾಥ್, ಭರತ್ ಮೃತದೇಹ – ಅಂತಿಮ ದರ್ಶನ ಪಡೆದು ಸಿಎಂ ಸಿದ್ದರಾಮಯ್ಯ ಭಾವುಕ

Btv Kannada
Author: Btv Kannada

Read More