ಡಿಸಿಎಂ ಡಿಕೆಶಿ ಭೇಟಿಯಾದ ಬ್ರಹ್ಮಾಂಡ ಗುರೂಜಿ – ಸಿಎಂ ಬದಲಾವಣೆ ವಿಚಾರ ಹೊತ್ತಲ್ಲೇ ಜ್ಯೋತಿಷಿ ಜೊತೆ ‘ಬಂಡೆ’ ಚರ್ಚೆ!

ಬೆಂಗಳೂರು ಅಭಿವೃದ್ಧಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರನ್ನು ಬ್ರಹ್ಮಾಂಡ ಗುರೂಜಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬ್ರಹ್ಮಾಂಡ ಗುರೂಜಿ ಖ್ಯಾತಿಯ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇವರಿಬ್ಬರ ಭೇಟಿಯು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸದಾ ಭವಿಷ್ಯ ನುಡಿಯುವ ಮೂಲಕ ಖ್ಯಾತಿ ಗಳಿಸಿರುವ ಬ್ರಹ್ಮಾಂಡ ಗುರೂಜಿ ಅವರು ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿರುವ ವಿಚಾರಕ್ಕೆ ರೆಕ್ಕೆಪುಕ್ಕ ಬಂದಿದೆ. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಸದ್ದು ಮಾಡುತ್ತಿರುವ ಹೊತ್ತಲ್ಲೇ ಬ್ರಹ್ಮಾಂಡ ಗುರೂಜಿ ಅವರು ಅಚ್ಚರಿ ಮೂಡಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನು ಗೃಹಕಚೇರಿಯಲ್ಲಿ ಭೇಟಿ ಮಾಡಿ ಕೆಲ ಹೊತ್ತು ಸಮಾಲೋಚನೆ ನಡೆಸಿದ್ರು.

ಇಬ್ಬರ ಭೇಟಿಯ ಫೋಟೋಗಳನ್ನು ಡಿಕೆ ಶಿವಕುಮಾರ್‌ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ಧಿ ಪಡೆದ ಜ್ಯೋತಿಷಿಗಳಾದ ಶ್ರೀನರೇಂದ್ರ ಬಾಬು ಶರ್ಮಾ ಅವರು ಇಂದು ನನ್ನನ್ನು ಗೃಹಕಚೇರಿಯಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು ಎಂದು ಹೇಳಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಡಿಕೆ ಶಿವಕುಮಾರ್‌ ಅವರ ಬಗ್ಗೆ ಗುರೂಜಿ ರಾಜಕೀಯ ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ ಇವರಿಬ್ಬರ ಭೇಟಿ ಮಹತ್ವ ಪಡೆದುಕೊಂಡಿದೆ.

ರಾಜ್ಯ ರಾಜಕೀಯದಲ್ಲಿ ಆಗುವ ಬದಲಾವಣೆ ಕುರಿತಾಗಿಯೂ ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದರು. ಮಿಥುನ ರಾಶಿಯಲ್ಲಿರುವ ಹೆಸರಾಂತ ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಅವರ ಸಂಬಂಧಗಳು ಬಯಲಿಗೆ ಬರಲಿವೆ. ಡೈವರ್ಸ್ ಪ್ರಕರಣಗಳು ಹೆಚ್ಚಾಗಲಿವೆ. ಸಿಎಂ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದೂ ಭವಿಷ್ಯವಾಣಿ ನುಡಿದಿದ್ದರು.

ಇದನ್ನೂ ಓದಿ : ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಡಿವೈಎಸ್‌ಪಿ ಕನಕಲಕ್ಷ್ಮಿಗೆ ಬಿಗ್​ ರಿಲೀಫ್​ – ಹೈಕೋರ್ಟ್​ನಿಂದ ಜಾಮೀನು ಮಂಜೂರು!

Btv Kannada
Author: Btv Kannada

Read More