ನವದೆಹಲಿ : ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಿನ್ನೆ ನಡೆಸಿದ ದಾಳಿಯಿಂದ ಮೂವರು ಕನ್ನಡಿಗರು ಸೇರಿ 26 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. 2019ರ ಪುಲ್ವಾಮಾ ದಾಳಿ ಬಳಿಕ ಅತ್ಯಂತ ರಣ ಭಯಂಕರ ಉಗ್ರರ ದಾಳಿ ಇದಾಗಿದೆ.
ಭಯಾನಕ ದಾಳಿಯ ಓರ್ವ ಭಯೋತ್ಪಾದಕನ ಫೋಟೋ ವೈರಲ್ ಆಗುತ್ತಿದ್ದಂತೆ ಮತ್ತೆ ನಾಲ್ವರು ಶಂಕಿತ ಉಗ್ರರ ಫೋಟೋಗಳನ್ನು ಭದ್ರತಾ ಸಂಸ್ಥೆ ರಿಲೀಸ್ ಮಾಡಿದೆ. ಕೈಯಲ್ಲಿ ಗನ್ ಹಿಡಿದು ಭೀಕರ ಕೃತ್ಯ ನಡೆಸುತ್ತಿರೋ ಭಯೋತ್ಪಾದಕರ ಫೋಟೋ ಇದೀಗ ವೈರಲ್ ಆಗಿದೆ.
ಪಹಲ್ಗಾಮ್ನಲ್ಲಿ ನಡೆದ ಉಗ್ರರು ದಾಳಿಯಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಉಗ್ರರು ಫೈರಿಂಗ್ ಮಾಡಿದ್ದು, ದುರ್ಘಡನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 17 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಇನ್ನು ಭದ್ರತಾ ಸಂಸ್ಥೆಗಳು ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಈ ಭಯಾನಕ ದಾಳಿಯ ಹಿಂದಿನ ಕ್ರೂರ ಯೋಜನೆಯನ್ನು ಬಯಲು ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಪ್ರತ್ಯಕ್ಷದರ್ಶಿಗಳ ಮಾಹಿತಿಯ ಆಧಾರದ ಮೇಲೆ ಶಂಕಿತ ಭಯೋತ್ಪಾದಕರ ರೇಖಾ ಚಿತ್ರವನ್ನು ಕೂಡ ಬಿಡಿಸಲಾಗಿದೆ.
ದಾಳಿಗೆ ಮುನ್ನ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗುತಾಣಗಳನ್ನು ನಿರ್ಮಿಸಿದ್ದರು. ಭಯೋತ್ಪಾದಕರು ಬಾಡಿ ಕ್ಯಾಮೆರಾಗಳನ್ನು ಧರಿಸಿದ್ದರು. ವಿಶೇಷವಾಗಿ ಹೆಲ್ಮೆಟ್ ಅಳವಡಿಸಿದ ಕ್ಯಾಮೆರಾಗಳನ್ನು ಧರಿಸಿ ಕೃತ್ಯವನ್ನು ಸಂಪೂರ್ಣವಾಗಿ ಚಿತ್ರೀಕರಿಸಿದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಮಾಹಿತಿ ಪ್ರಕಾರ ಮೂವರು ಭಯೋತ್ಪಾದಕರು ಪ್ರವಾಸಿಗರನ್ನು ಒಟ್ಟುಗೂಡಿಸಿ ಪುರುಷ ಮತ್ತು ಮಹಿಳಾ ಗುಂಪುಗಳಾಗಿ ವಿಂಗಡಿಸಿದ್ದಾರೆ. ನಂತರ ಅವರ ಧರ್ಮ, ಹೆಸರನ್ನು ಕೇಳಿದ್ದಾರೆ. ಈ ವೇಳೆ ಹಿಂದೂ ಹೆಸರು ಹೇಳಿದವರ ಮೇಲೆ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ : ಅಣ್ಣಾವ್ರ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ.. ಟೈಟಲ್ ಏನು?
