ಬೆಂಗಳೂರು : ಬಿಬಿಎಂಪಿಯ ದಾಸರಹಳ್ಳಿ ವಿಭಾಗದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಡಿ ನಡೆದಿರುವ ₹25 ಕೋಟಿ ವೆಚ್ಚದ ಕಾಮಗಾರಿಯಲ್ಲಿ ಲೋಪ ದೋಷಗಳಿದ್ದು, ಬಿಲ್ ಪಾವತಿಗೆ ತಡೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಆರ್. ಮಂಜುನಾಥ್ ಅವರು ಈ ಸಂಬಂಧ 44 ಪುಟಗಳ ದಾಖಲೆಯೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದು, ಈ ಕಾಮಗಾರಿ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
‘ಬಿಬಿಎಂಪಿಗೆ ಸೇರಿದ 110 ಹಳ್ಳಿಗಳ ಅಭಿವೃದ್ಧಿ ಯೋಜನೆಯಲ್ಲಿ ದಾಸರಹಳ್ಳಿ ವಲಯದಲ್ಲಿ ಶೆಟ್ಟಿಹಳ್ಳಿ, ಬೃಂದಾವನ ಬಡಾವಣೆ, ಬಾಬಣ್ಣ ಲೇಔಟ್, ಸಪ್ತಗಿರಿ ಬಡಾವಣೆ, ಎನ್‌ಎಂಎಚ್ ಲೇಔಟ್, ಶ್ರೀದೇವಿ ಲೇಔಟ್ ಸುತ್ತಮುತ್ತಲಿನ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳ ಯೋಜನೆ ನಿರ್ವಹಣೆ ಸಲಹಾ ಸಂಸ್ಥೆಯಾಗಿ (ಪಿಎಂಸಿ) ಮೆಕಾಡೆಜ್ ಕೋರ್ ಟೆಕ್ನಾಲಜಿ ಸಂಸ್ಥೆಗೆ 2024ರ ಮಾರ್ಚ್ 24ರಂದು ಕಾರ್ಯಾದೇಶ ನೀಡಲಾಗಿದೆ. ಕಾರ್ಯಾದೇಶ ನೀಡಿರುವ ದಾಸರಹಳ್ಳಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಧರಣೇಂದ್ರ ಕುಮಾರ್ ಅವರು ಮಾರ್ಚ್ 11ರಂದೇ ವರ್ಗಾವಣೆಯಾಗಿದ್ದರು. ವರ್ಗಾವಣೆಯಾದ ಎರಡು ದಿನಗಳ ನಂತರ ಧರಣೇಂದ್ರ ಕುಮಾರ್ ಕಾರ್ಯಾದೇಶಕ್ಕೆ ಸಹಿ ಹಾಕಿರುವುದು ಕಾನೂನುಬಾಹಿರ ಎಂದು ದೂರಿದ್ದಾರೆ.
‘ಎರಡು ಪ್ರಭಾರ ವರ್ಗಾವಣೆಯ ಪ್ರಮಾಣಪತ್ರಗಳನ್ನು (ಸಿಟಿಸಿ) ಸಿದ್ಧಪಡಿಸಿರುವುದು ಅಪರಾಧವಾಗಿದ್ದು, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವುದನ್ನೂ ತಿದ್ದಿದ್ದಾರೆ. ದಾಸರಹಳ್ಳಿ ವಿಭಾಗದ ಹಾಜರಾತಿ ಪುಸ್ತಕದಲ್ಲಿ ಮಾರ್ಚ್ 11ರಿಂದಲೇ ಧರಣೇಂದ್ರ ಕುಮಾರ್ ವರ್ಗಾವಣೆಯಾಗಿದ್ದಾರೆಂದು ಬರೆಯಲಾಗಿದೆ. ಕೇಂದ್ರ ಕಚೇರಿಯಲ್ಲಿರುವ ಟಿವಿಸಿಸಿ ವಿಭಾಗಕ್ಕೆ ವರ್ಗಾವಣೆಯಾಗಿದ್ದ ಧರಣೇಂದ್ರಕುಮಾರ್ ಮಾರ್ಚ್ 12ರಿಂದ ಹಾಜರಾತಿ ಪುಸ್ತಕದಲ್ಲಿ ಅಲ್ಲೂ ಸಹಿ ಮಾಡಿದ್ದಾರೆ. ನಂತರ ಹಾಜರಾತಿ ಪುಸ್ತಕದಲ್ಲಿ ತಿದ್ದಲಾಗಿದೆ’ ಎಂದಿರುವ ಮಂಜುನಾಥ್, ಮಾಹಿತಿ ಹಕ್ಕು ಕಾರ್ಯಕರ್ತ ಎಂ.ಎಚ್. ನಂದೀಶ್ ಅವರು ಪಡೆದಿರುವ ದಾಖಲೆಗಳನ್ನೂ ದೂರಿನೊಂದಿಗೆ ಲಗತ್ತಿಸಿದ್ದಾರೆ.
‘ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಆಗಿದ್ದ ಕೆ.ವಿ. ರವಿ ಅವರ ಮಾರ್ಗದರ್ಶನದಲ್ಲಿ ಹಾಜರಾತಿ ಪುಸ್ತಕ ಹಾಗೂ ಸಿಟಿಸಿ ಪ್ರತಿಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅರ್ಹವಿಲ್ಲದ ಸಂಸ್ಥೆಗೆ ಕಾರ್ಯಾದೇಶ ನೀಡಲು ಸಹಕರಿಸಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾರ್ಯಾದೇಶದಂತೆ ಎಲ್ಲ ಕಾಮಗಾರಿಗಳೂ ನಡೆದಿಲ್ಲದಿದ್ದರೂ ಬಿಲ್ ಪಾವತಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಯಾವುದೇ ರೀತಿಯ ಬಿಲ್‌ಗಳನ್ನು ಪಾವತಿ ಮಾಡಬಾರದು’ ಮಂಜುನಾಥ್ ಆಗ್ರಹಿಸಿದ್ದಾರೆ.
ಇನ್ನು ‘ಮೂಲ ವಿಸ್ತ್ರತ ಯೋಜನಾ ವರದಿಯಲ್ಲಿದ್ದ (ಡಿಪಿಆರ್) ಕಾಮಗಾರಿಗಳನ್ನು ಬಿಟ್ಟು, ಅಭಿವೃದ್ಧಿಯಾಗಿರುವ ರಸ್ತೆಗಳನ್ನೇ 125 ಕೋಟಿ ಕಾಮಗಾರಿಗಳಲ್ಲಿ ಸೇರಿಸಿ, ಅಕ್ರಮವಾಗಿ ಬಿಲ್ ತಯಾರಿಸಿದ್ದಾರೆ. ವರ್ಗಾವಣೆಯಾಗಿರುವ ಎಂಜಿನಿಯರ್ ಅವರು ಕಾರ್ಯಾದೇಶ ನೀಡಿರುವುದು ಕಾನೂನುಬಾಹಿರ. ಈ ಬಗ್ಗೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ವಲಯ ಆಯುಕ್ತರಿಗೂ ದೂರು ನೀಡಿದ್ದೇನೆ’ ಎಂದು ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಆರ್. ಮಂಜುನಾಥ ತಿಳಿಸಿದ್ದಾರೆ.
ಇದನ್ನೂ ಓದಿ : ಕಾಶ್ಮೀರದಲ್ಲಿ ಹಿಂದೂಗಳ ಮಾರಣ ಹೋಮಕ್ಕೆ ಮೋದಿ, ಅಮಿತ್ ಶಾ ಕಾರಣ – ‘ಕೈ’ ಶಾಸಕ ರಮೇಶ್ ಬಾಬು ವಿವಾದಾತ್ಮಕ ಹೇಳಿಕೆ!
