ಬೆಂಗಳೂರು : ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನ್ನಡಿಗರು ಹತ್ಯೆಗೀಡಾಗಿರುವ ಹಿನ್ನೆಲೆ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಕಾಶ್ಮೀರಕ್ಕೆ ತೆರಳಿದ್ದಾರೆ. ಉಗ್ರರ ಗುಂಡಿನ ದಾಳಿಯಲ್ಲಿ ಮೃತರಾದದವರ ದೇಹಗಳನ್ನು ರಾಜ್ಯಕ್ಕೆ ಕಳುಹಿಸುವುದು ಹಾಗೂ ಘಟನೆಯಿಂದ ಆಘಾತಗೊಂಡ ಕುಟುಂಬದವರನ್ನು ಸಂತೈಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಸಚಿವ ಲಾಡ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಸಿಕ್ಕ ನಂತರ ತಡರಾತ್ರಿಯೇ ಪಹಲ್ಗಾಮ್‌ಗೆ ಪ್ರಯಾಣ ಬೆಳೆಸಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿ ಅಲ್ಲಿಂದ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ. ಕಾಶ್ಮೀರದ ಘಟನೆಯಲ್ಲಿ ಕರ್ನಾಟಕದ ಜನರು ಕೂಡ ಸಾವನ್ನಪ್ಪಿದ್ದು, ಈ ಹಿನ್ನೆಲೆ ಕನ್ನಡಿಗರ ರಕ್ಷಣೆಗಾಗಿ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಕನ್ನಡಿಗರ ಸುರಕ್ಷತೆ ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳಲು ಸಚಿವ ಸಂತೋಷ್ ಲಾಡ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ದಕ್ಷಿಣ ಕಾಶ್ಮೀರದ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಕಾಏಕಿ ನಡೆಸಿರುವ ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ ಸುಮಾರು 28 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಶಿವಮೊಗ್ಗ, ಬೆಂಗಳೂರು ಮೂಲದ ಪ್ರವಾಸಿಗರು ಕೂಡ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ ಕೆಲವು ಕನ್ನಡಿಗರು ಸಿಲುಕಿರುವ ಬಗ್ಗೆಮಾಹಿತಿ ಲಭ್ಯವಾಗಿದ್ದು, ಈ ಕಾರಣಕ್ಕಾಗಿ ಕರ್ನಾಟಕ ಸರ್ಕಾರವು ತಕ್ಷಣ ಕ್ರಮ ಕೈಗೊಂಡಿದೆ.
ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರಕ್ಕೆ ತೆರಳಿ, ಸ್ಥಳೀಯ ಆಡಳಿತ, ಭದ್ರತಾ ಪಡೆಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ಅಲ್ಲಿ ಕನ್ನಡಿಗರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ಸುರಕ್ಷಿತ ಸ್ಥಳಾಂತರ ಮತ್ತು ಇತರ ಸಹಾಯವನ್ನು ಒದಗಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ.
ಸಂತ್ರಸ್ತ ಕನ್ನಡಿಗರ ರಕ್ಷಣೆಗೆ ಕ್ರಮ : ಸಿದ್ದರಾಮಯ್ಯ.. ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ. ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ. ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಕೇಸ್ – ಕಾಂಗ್ರೆಸ್ ಮುಖಂಡ ತನ್ನೀರ ಮೈನಾ ನಿರೀಕ್ಷಣಾ ಜಾಮೀನು ಅರ್ಜಿ ವಜಾ!
