ಪಹಲ್ಗಾಮ್ ಭಯೋತ್ಪಾದನಾ ದಾಳಿ – ಸೌದಿ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಮೋದಿ ವಾಪಸ್‌!

ನವದೆಹಲಿ : ಜಮ್ಮು ಕಾಶ್ಮೀರದ ಹಿಮದ ಮೇಲೆ ಮತ್ತೆ ನೆತ್ತರು ಚೆಲ್ಲಿದೆ. ನಿನ್ನೆ ಖ್ಯಾತ ಪ್ರವಾಸಿ ತಾಣವಾದ ಪಹಲ್ಗಾಮ್​ನಲ್ಲಿ ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಮಂದಿ ಮೃತಪಟ್ಟಿದ್ದಾರೆ.
ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಮಂಗಳವಾರ ರಾತ್ರಿ ಭಾರತಕ್ಕೆ ವಾಪಸ್ ಆಗಿದ್ದಾರೆ

ನಿಗದಿತ ವೇಳಾಪಟ್ಟಿಯಂತೆ ಮೋದಿ ಬುಧವಾರ ರಾತ್ರಿ ನವದೆಹಲಿಗೆ ಮರಳಬೇಕಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಹಿನ್ನೆಲೆ ಅವರು ಮುಂಚಿತವಾಗಿ ದೇಶಕ್ಕೆ ವಾಪಸ್ ಆಗಿದ್ದಾರೆ. ಮೋದಿ, ತಮಗಾಗಿ ಏರ್ಪಡಿಸಿದ್ದ ಅಧಿಕೃತ ಔತಣಕೂಟವನ್ನು ಬಿಟ್ಟು ತಮ್ಮ ಪ್ರವಾಸ ಮೊಟಕುಗೊಳಿಸಿ ಮಂಗಳವಾರ ರಾತ್ರಿ ದೇಶಕ್ಕೆ ಮರಳಿದ್ದಾರೆ.

ಸೌದಿ ನಾಯಕರೂ ಕೂಡ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸೌದಿ ರಾಜಕುಮಾರ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದು, ಭಾರತಕ್ಕೆ ಯಾವುದೇ ಸಹಾಯ ಮಾಡಲು ಸಿದ್ಧ ಎಂದು ಭರವಸೆ ನೀಡಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ಸಹಕಾರ ಹೊಂದಿವೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಪಹಲ್ಗಾಮ್‌ ಉಗ್ರರ ದಾಳಿ – ಮೃತ ಮಂಜುನಾಥ್​ ಕುಟುಂಬದ ನೆರವಿಗೆ ನಿಂತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ!

Btv Kannada
Author: Btv Kannada

Read More