ಪಹಲ್ಗಾಮ್‌ ಉಗ್ರರ ದಾಳಿ – ಮೃತ ಮಂಜುನಾಥ್​ ಕುಟುಂಬದ ನೆರವಿಗೆ ನಿಂತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ!

ನವದೆಹಲಿ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿ ತೀರ ಆಘಾತಕಾರಿ. ಅತ್ಯಂತ ಪ್ರವಾಸಿಗರ‌ ಆಕರ್ಷಕ ಸ್ಥಳದಲ್ಲಿ ನಿನ್ನೆ ಮಧ್ಯಾಹ್ನ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ವೇಳೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ಶರ್ಮ ಮೃತ ಪಟ್ಟಿರೋದು ದುರದೃಷ್ಟಕರ. ಮೃತರ ಪಾರ್ಥಿವ ಶರೀರ ರವಾನೆಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಸಚಿವ ಪ್ರಹ್ಲಾದ ಅವರು, ಈ ಸಮಯದಲ್ಲಿ ಶ್ರೀಮತಿ ಪಲ್ಲವಿ ಅವರೊಂದಿಗೆ ಹಾಗೂ ಶಿವಮೊಗ್ಗದಲ್ಲಿರುವ ಅವರ ತಾಯಿಯವರ ಜೊತೆ ಮಾತನಾಡಿ, ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರದಾಳಿಯಲ್ಲಿ ಅಸುನೀಗಿರುವ ಅವರ ಪತಿ ಕರ್ನಾಟಕದ ಶಿವಮೊಗ್ಗ ‌ಜಿಲ್ಲೆಯ ಮಂಜುನಾಥ್​ ಆತ್ಮಕ್ಕೆ ಶಾಂತಿ ಕೋರಿ, ಸಾಂತ್ವನ ‌ಹೇಳಿದ್ದೇನೆ.

ಶ್ರೀಮತಿ ಪಲ್ಲವಿ ಮತ್ತು ಅವರ ಮಗ ಅನಂತ್​ನಾಗ್​ನಲ್ಲಿದ್ದು, ಸುರಕ್ಷಿತರಾಗಿದ್ದಾರೆ‌. ಮೃತರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಕಾಶ್ಮೀರದ‌ ಲೆಫ್ಟಿನೆಂಟ್ ಗವರ್ನರ್ ಕಚೇರಿಗೂ ಸಂಪರ್ಕಿಸಿ ಸೂಚನೆ ನೀಡಿದ್ದೇನೆ. ಶ್ರೀಮತಿ ಪಲ್ಲವಿ ಮತ್ತು ಅವರ ಮಗನನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಶೀಘ್ರಗತಿಯಲ್ಲಿ ಮರಳಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಯಾರನ್ನೂ ಸುಮ್ಮನೆ ಬಿಡಲ್ಲ, ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ – ಪ್ರಧಾನಿ ಮೋದಿ ಪ್ರತಿಜ್ಞೆ!

Btv Kannada
Author: Btv Kannada

Read More