‘ನಂದಿನಿ’ ಉತ್ಪನ್ನಕ್ಕೆ ಹೆಚ್ಚಿದ ಡಿಮ್ಯಾಂಡ್‌ – ರಾಜಸ್ಥಾನ, ಮಧ್ಯಪ್ರದೇಶಕ್ಕೂ ವಿಸ್ತರಿಸಲು KMF ಪ್ಲ್ಯಾನ್‌!

ಬೆಂಗಳೂರು : ದೇಶದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ ಹವಾ ಸೃಷ್ಟಿಸಲು ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಮುಂದಾಗಿದೆ. ದೆಹಲಿಯಲ್ಲಿ ಮಾರಾಟ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಇದೀಗ ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಕೆಎಂಫ್​​ (KMF) ಚಿಂತನೆ ನಡೆಸಿದೆ. ದಕ್ಷಿಣ ಭಾರತದ ವ್ಯಾಪ್ತಿ ಮೀರಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಯೋಜನೆಯ ಭಾಗವಾಗಿ ಕೆಎಂಎಫ್​ ಈ ಯೋಜನೆಗೆ ಮುಂದಾಗಿದೆ.

ರಾಜಸ್ಥಾನದಲ್ಲಿ ಹಾಲು ಸಂಗ್ರಹ ಪ್ರಾರಂಭಿಸಲು ಮತ್ತು ಕೊ-ಪ್ಯಾಕೇಜಿಂಗ್ ಸೆಂಟರ್​ಗಳನ್ನು ಸ್ಥಾಪಿಸಲು ಕೆಎಂಎಫ್ ಯೋಜಿಸಿದೆ. ಪೂರೈಕೆ ಸರಪಳಿಯನ್ನು ಬಲಪಡಿಸಲು ಮತ್ತು ಉತ್ತರ ಭಾರತದ ಮಾರುಕಟ್ಟೆಯಲ್ಲಿ ಪ್ರಭಾವ ಹೆಚ್ಚಿಸಲು ರಾಜಸ್ಥಾನ ಮಾತ್ರವಲ್ಲದೆ, ಮಧ್ಯಪ್ರದೇಶವನ್ನು ಪ್ರಮುಖ ಭಾಗವಾಗಿ ಪರಿಗಣಿಸಲಾಗುತ್ತಿದೆ ಎಂದು ಕೆಎಂಎಫ್ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಉತ್ತರ ಭಾಗದ ಮಾರುಕಟ್ಟೆಗಳಿಗೆ ಹತ್ತಿರದಲ್ಲಿ ಕೊ-ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಗಾಟ ದೂರವನ್ನು ಕಡಿಮೆ ಮಾಡುವುದು ಕೆಎಂಎಫ್ ಗುರಿಯಾಗಿದೆ.

ಮಧ್ಯ ಪ್ರದೇಶದಲ್ಲಿ ಕೊ-ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ ಕೋಲ್ಡ್ ಸ್ಟೋರೇಜ್ ಸರಪಳಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಪೌಷ್ಟಿಕಾಂಶ ಸಂರಕ್ಷಿಸಲು ಮತ್ತು ಹಾಳಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಕೊ-ಪ್ಯಾಕೇಜಿಂಗ್ ಸೆಂಟರ್​​ಗಳು ಕೆಎಂಎಫ್‌ಗೆ ಹತ್ತಿರದ ಸ್ಥಳಗಳಿಂದ ಅಥವಾ ಕರ್ನಾಟಕದಿಂದ ಹಾಲು ಅಥವಾ ಸಂಸ್ಕರಿಸಿದ ಡೈರಿ ಉತ್ಪನ್ನಗಳನ್ನು ಸ್ವೀಕರಿ ಶೇಖರಿಸಿ ಇಡಲು ಸಹಾಯ ಮಾಡುತ್ತವೆ. ಅಲ್ಲದೆ, ಮಾರುಕಟ್ಟೆಗೆ ಸನಿಹದಲ್ಲೇ ಅಂತಿಮ ಪ್ಯಾಕೇಜಿಂಗ್ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ತಾಜಾ ಉತ್ಪನ್ನಗಳು ಚಿಲ್ಲರೆ ಮಾರಾಟ ಮಳಿಗೆಗಳನ್ನು ವೇಗವಾಗಿ ತಲುಪುವಂತೆ ಮಾಡಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಕೆಎಂಎಫ್ ತನ್ನ ಬೇಕರಿ ಮತ್ತು ಮಿಠಾಯಿ ವಿಭಾಗದ ಅಡಿಯಲ್ಲಿ ಬ್ರೆಡ್, ಬನ್ ಮತ್ತು ಕ್ರೀಮ್ ಬನ್ ಎಂಬ ಮೂರು ವಸ್ತುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಸ್ಲೈಸ್ ಕೇಕ್‌ಗಳು, ಹಣ್ಣಿನ ಕೇಕ್‌ಗಳು, ಕಪ್‌ಕೇಕ್‌ಗಳು, ಮಫಿನ್‌ಗಳು ಮತ್ತು ಇನ್ನೂ ಹೆಚ್ಚಿನ ಹೊಸ ಉತ್ಪನ್ನಗಳನ್ನು ಸೇರಿಸಿ ಉತ್ಪನ್ನಗಳನ್ನು ವಿಸ್ತರಿಸಲು ಚಿಂತನೆ ನಡೆಸಿದೆ. ಈ ಉತ್ಪನ್ನಗಳ ಅಡಿಯಲ್ಲಿ ಒಟ್ಟು 22 ರೂಪಾಂತರಗಳನ್ನು ಮಾರುಕಟ್ಟೆಗೆ ಪೂರೈಸಲು ಉದ್ದೇಶಿಸಿದೆ.

ಇದನ್ನೂ ಓದಿ : ಲಕ್ನೋದಲ್ಲಿ ಮಿಂಚಿದ ಕನ್ನಡಿಗ ರಾಹುಲ್ – LSG ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು!

Btv Kannada
Author: Btv Kannada

Read More