ಬೆಂಗಳೂರಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಕೈಯಿಂದ ಹಲ್ಲೆಗೊಳಗಾಗಿದ್ದ ವಿಕಾಸ್ ಕುಮಾರ್ ಕೊನೆಗೂ ರಿಲೀಸ್ ಆಗಿದ್ದಾರೆ. ಕನ್ನಡಪರ ಹೋರಾಟಗಾರರ ಪ್ರತಿಭಟನೆ ಹಾಗೂ ನಿಜ ಘಟನೆ ಬಳಿಕ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಿಂದ ಕನ್ನಡಿಗ ವಿಕಾಸ್ ಬಿಡುಗಡೆ ಆಗಿದ್ದಾರೆ. ಇದೀಗ ವಿಕಾಸ್ ಕುಮಾರ್ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿದೆ, ಎಲ್ಲಾ ಕಡೇ ನನ್ನ ಬಗ್ಗೆ ನೋಡಿದ್ದೀರಿ. ಸೋಮವಾರ ಬೆಳಗ್ಗೆ ಬೈಯಪ್ಪನಹಳ್ಳಿ ಬಳಿ ಗಲಾಟೆಯಾಗಿದೆ. ಎಲ್ಲರಿಗೂ ಧನ್ಯವಾದ ಹೇಳುವ ಉದ್ದೇಶದಿಂದ ಈ ವಿಡಿಯೋ ಮಾಡುತ್ತಿದ್ದೇನೆ. ಎಲ್ಲಾ ಕನ್ನಡ ಮಾಧ್ಯಮಗಳು, ಎಲ್ಲಾ ಕನ್ನಡ ಸಂಘಟನೆಗಳಿಗೆ ಧನ್ಯವಾದ ಹೇಳುತ್ತೇನೆ. ಬೈಯಪ್ಪನಹಳ್ಳಿ ಪೊಲೀಸರಿಗೆ ಧನ್ಯವಾದ, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಏನಾಗಿದೆ, ನಡೆದ ಘಟನೆ ಬಗ್ಗೆಯೂ ನನ್ನ ಬಳಿ ಪೊಲೀಸರು ಕೇಳಿ, ನನ್ನ ಕಡೆಯಿಂದಲೂ ದೂರು ತೆಗೆದುಕೊಂಡಿದ್ದಾರೆ. ಅಲ್ಲದೇ ಬೈಯಪ್ಪನಹಳ್ಳಿ ಪೊಲೀಸರು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಧನ್ಯವಾದ ಹೇಳಿದ್ದಾರೆ.
ಇನ್ನು ಮಾನ್ಯ ಮುಖ್ಯಮಂತ್ರಿಗಳು ಸ್ಪಂದಿಸಿದಕ್ಕೆ ಧನ್ಯವಾದ ಸಲ್ಲಿಸಿದ ವಿಕಾಸ್ ಕುಮಾರ್, ಈ ಘಟನೆಯಿಂದ ನನ್ನ ಕೆಲಸಕ್ಕೆ ಎಫೆಕ್ಟ್ ಆಗಿದೆ. ಕೆಲ ವರ್ಷಗಳ ಹಿಂದೆ ನನ್ನ ತಂದೆ ತೀರಿಕೊಂಡರು, ನನ್ನ ತಾಯಿಯನ್ನು ನಾನೇ ನೋಡಿಕೊಳ್ಳುತ್ತಿದೆ. ಸದ್ಯ ಕೆಲಸಕ್ಕೂ ತೊಂದರೆಯಾಗಿದೆ. ಆದರೆ ನಾನು ಇದನ್ನು ಇಲ್ಲಿಗೆ ಬಿಡೋದಿಲ್ಲ. ಮಾನ್ಯ ಕಮಿಷನರ್ ಈ ಕೇಸಲ್ಲಿ ನಿಷ್ಪಕ್ಷಪಾತ ತನಿಖೆ, ಕೆಲಸಕ್ಕೆ ಎಫೆಕ್ಟ್ ಆಗದ ರೀತಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ವಿಂಗ್ ಕಮಾಂಡರ್ ಕೇಸಲ್ಲಿ ನನಗೆ ಏನ್ ನ್ಯಾಯ ಸಿಗಬೇಕು, ಅದನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇನ್ನು ನಿನ್ನೆ ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸೇರಿ ಹಲವು ಕಡೆ ಭಾರೀ ಚರ್ಚೆಗೆ ಗುರಿಯಾಗಿತ್ತು. ಆರಂಭದಲ್ಲಿ ಕನ್ನಡ ಭಾಷಾ ವಿಷಯಕ್ಕಾಗಿ ನಡೆದ ಜಗಳ ಎಂದು ವೈರಲ್ ಆಗಿತ್ತಾದರೂ ಬಳಿಕ ಕಾರು, ಬೈಕಿನ ನಡುವೆ ಡಿಕ್ಕಿಯಾಗಿದ್ದರಿಂದ ಘಟನೆ ಆಗಿದೆ ಎಂದು ಗೊತ್ತಾಗಿತ್ತು.
ಕನ್ನಡಿಗನ ಮೇಲೆ ಹಲ್ಲೆ ನಡೆಸಿದ ವಿಂಗ್ ಕಮಾಂಡರ್ ವಿರುದ್ಧ ವಿಕಾಸ್ ಕುಮಾರ್ ದೂರಿನ ಮೇರೆಗೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 109, 115(2), 304, 324, 352 ಸೆಕ್ಷನ್‌ಗಳ ಅಡಿ FIR ದಾಖಲು ಮಾಡಲಾಗಿದೆ. ಇದೀಗ ಶಿಲಾದಿತ್ಯ ಬೋಸ್ ಅರೆಸ್ಟ್ಗೆ ಪೊಲೀಸರು ಸಿದ್ದತೆ ನಡೆಸುತ್ತಿದ್ದಾರೆ.
