ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಭಾರೀ ಗೋಲ್ಮಾಲ್ – ಪ್ರಾಧ್ಯಾಪಕ ಹುದ್ದೆಗೆ 50 ಲಕ್ಷ ಕಿಕ್ ಬ್ಯಾಕ್!

ಚಿತ್ರದುರ್ಗ : ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಹುದ್ದೆಗಳಿಗೆ ₹50 ಲಕ್ಷ ಲಂಚ ಪಡೆಯಲಾಗಿದೆ ಎಂಬ ಆರೋಪ ರಾಜ್ಯದ ವೈದ್ಯಕೀಯ ಕಾಲೇಜು ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಕುರಿತು ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರ ಕಚೇರಿಗಳಿಗೆ ದೂರುಗಳ ಸುರಿಮಳೆಯೇ ದಾಖಲಾಗಿದೆ.

2023-24ನೇ ಸಾಲಿನಲ್ಲಿ ಆರಂಭವಾದ ವೈದ್ಯಕೀಯ ಕಾಲೇಜಿಗೆ 58 ಬೋಧಕ ಹುದ್ದೆಗಳ ಮಂಜೂರಾತಿ ಇದೆ. ಅದರಲ್ಲಿ 36 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ. ಪ್ರಾಧ್ಯಾಪಕ ಹುದ್ದೆಗೆ ₹ 50 ಲಕ್ಷ, ಸಹ ಪ್ರಾಧ್ಯಾಪಕ ಹುದ್ದೆಗೆ ₹ 40 ಲಕ್ಷ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ₹ 25 ಲಕ್ಷದಿಂದ ₹ 30 ಲಕ್ಷದವರೆಗೂ ಲಂಚ ಪಡೆಯಲಾಗಿದೆ ಎಂಬ ದೂರುಗಳು ದಾಖಲಾಗಿವೆ.

ವ್ಯಾಪಕ ದೂರುಗಳ ಕಾರಣ ಪ್ರಾದೇಶಿಕ ಆಯುಕ್ತ ಅದಿತ್ಯ ಆಮ್ಹಾನ್ ಬಿಸ್ವಾಸ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಯುವರಾಜ್ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ. ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಗೂ ಹಲವರು ಪತ್ರ ಬರೆದಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಹೀಗಾಗಿ ತಾತ್ಕಾಲಿಕ ಪಟ್ಟಿ ತೂಗುಯ್ಯಾಲೆಯಲ್ಲಿ ನೇತಾಡುವಂತಾಗಿದೆ.

ದೂರುಗಳೇನು? : ನೇಮಕಾತಿ ಅಧಿಸೂಚನೆ ಪ್ರಕಟಗೊಂಡ ನಂತರ ಕೇವಲ 2 ದಿನ ಸಮಯ ನೀಡಿದ್ದು ಏಕೆ’ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ. ನೇಮಕಾತಿಯಲ್ಲಿ ಮೀಸಲಾತಿಯ ರೋಸ್ಟರ್, ಜೇಷ್ಠತೆಯನ್ನು ಪರಿಗಣಿಸಿಲ್ಲ ಎಂದೂ ಆರೋಪಿಸಲಾಗಿದೆ. ಜೊತೆಗೆ ಸಂದರ್ಶನ ಪ್ರಕ್ರಿಯೆಯನ್ನು ಚಿತ್ರದುರ್ಗದಲ್ಲಿ ನಡೆಸದೇ ಬೆಂಗಳೂರಿನಲ್ಲಿ ನಡೆಸಿರುವುದು ಅನುಮಾನಾಸ್ಪದ ಎಂದು ದೂರಲಾಗಿದೆ.

ಟಿ.ಎ, ಡಿ.ಎ ನೀಡದೇ ಬೆಂಗಳೂರಿಗೆ ಕರೆಸಿ ಕೆಲವೇ ನಿಮಿಷದಲ್ಲಿ ಸಂದರ್ಶನ ಮುಗಿಸಲಾಯಿತು. ಹಣ ಕೇಳುವುದಕ್ಕಾಗಿಯೇ ಪ್ರತ್ಯೇಕವಾಗಿ ಮತ್ತೆ ಬೆಂಗಳೂರಿಗೆ ಕರೆಸಿದ್ದರು. ವೈದ್ಯಕೀಯ ಕಾಲೇಜು ನಿರ್ದೇಶಕ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಅಕ್ರಮದಲ್ಲಿ ನೇರವಾಗಿ ಪಾಲ್ಗೊಂಡಿದ್ದಾರೆ’ ಎಂದು ಪ್ರಾದೇಶಿಕ ಆಯುಕ್ತರಿಗೆ ವೈದ್ಯರೊಬ್ಬರು ದೂರು ನೀಡಿದ್ದಾರೆ.

ಇದನ್ನೂ ಓದಿ : ರಿಕ್ಕಿ ರೈ ಕೊಲೆ ಯತ್ನ ಕೇಸ್ – ಅನುರಾಧ ರೈ ಅರೆಸ್ಟ್ ಮಾಡುವಂತಿಲ್ಲ.. ಹೈಕೋರ್ಟ್ ಆದೇಶ!

Btv Kannada
Author: Btv Kannada

Read More