ಓಂ ಪ್ರಕಾಶ್ ಕೊಲೆಗೆ ಪತ್ನಿ, ಮಗಳ ಖತರ್ನಾಕ್ ಸ್ಕೆಚ್​ – ಖಾರದಪುಡಿ, ಅಡುಗೆ ಎಣ್ಣೆ, ಬಂದೂಕು ರಹಸ್ಯ ರಿವೀಲ್!

ಬೆಂಗಳೂರು : ಕರ್ನಾಟಕದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ A1, ಮಗಳು ಕೃತಿ A2 ಆಗಿದ್ದಾರೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಇದೀಗ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರೇ ಪೊಲೀಸರ ವಿಚಾರಣೆ ವೇಳೆ ಕೊಲೆ ರಹಸ್ಯವನ್ನು ಬಾಯಿ ಬಿಟ್ಟಿದ್ದಾರೆ. ತಲೆಗೆ ಗನ್ ಪಾಯಿಂಟ್, ಖಾರದ ಪುಡಿ, ಅಡುಗೆ ಎಣ್ಣೆ, ಹಗ್ಗ, ಚಾಕು ಹಾಗೂ ಕೊಲೆ ನಡೆದ ಘಟನೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

‘ಕಳೆದ ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೇ ಗನ್ ತಂದು ನನಗೆ ಮತ್ತು ನನ್ನ ಮಗಳಿಗೆ ಶೂಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿತ್ತು. ನಾನು ಮತ್ತು ಮಗಳು ಇವರ ಕಾಟದಿಂದ ತುಂಬಾ ಬೇಸತ್ತು ಹೋಗಿದ್ದೆವು.

ಅದೇ ರೀತಿ ನಿನ್ನೆ ಬೆಳಗ್ಗೆಯಿಂದಲೂ ಬೇರೆ ಬೇರೆ ವಿಚಾರಕ್ಕೆ ‌ಮನೆಯಲ್ಲಿ ಜಗಳ ಶುರುವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋದಾಗ ನಮ್ಮನ್ನೇ ಕೊಲೆ ಮಾಡಲು ಗಂಡ ಓಂ ಪ್ರಕಾಶ್ ಪ್ರಯತ್ನ ಮಾಡಿದರು. ಆಗ ಅದರಿಂದ ತಪ್ಪಿಸಿಕೊಳ್ಳಲು ತುಂಬಾ ಪರದಾಡಿದ್ದೇವೆ. ನಮ್ಮನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದ್ದೀವಿ. ನಾವು ಬದುಕುಳಿಯಬೇಕೆಂದರೆ ಅವರನ್ನೇ ಕೊಲೆ ಮಾಡುವುದು ಉತ್ತಮ ಎಂಬ ತೀರ್ಮಾನಕ್ಕೆ ಬಂದೆವು. ನಂತರ, ಓಂ ಪ್ರಕಾಶ್ ‌ಮೇಲೆ ಖಾರದ ಪುಡಿ ಹಾಕಲಾಯಿತು. ನಂತರ, ಅವರು ಓಡಾಡಲು ಆಗದಂತೆ ಅಡುಗೆ ಎಣ್ಣೆಯನ್ನು ಸುರಿಯಲಾಯಿತು. ನಂತರ ಓಂ ಪ್ರಕಾಶ್ ‌ಕೈ-ಕಾಲು‌ ಕಟ್ಟಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಚುಚ್ಚಲಾಯಿತು ಎಂದು ಪಲ್ಲವಿ ಒಪ್ಪಿಕೊಂಡಿದ್ದಾರೆ.

ಆ ಬಳಿಕ ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಸಂಜೆ ಸ್ಥಳೀಯ ‌ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಾದ ಕೂಡಲೇ ಪೊಲೀಸರು ಅರೆಸ್ಟ್  ಮಾಡಿದ್ದಾರೆ ಎಂದು ಪಲ್ಲವಿ ಅವರು ಹೇಳಿದ್ದಾರೆ.

ಈಗಾಗಲೇ ಕೊಲೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಓಂ ಪ್ರಕಾಶ್ ಪುತ್ರ ಕಾರ್ತೀಕೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ. ಕಾರ್ತೀಕೇಶ್ ನೀಡಿದ ದೂರಿಲ್ಲಿ ತಂಗಿ ಕೃತಿ ಬಗ್ಗೆಯೂ ಉಲ್ಲೇಖಿಸಲಾಗಿದೆ. ಕಾರ್ತೀಕೇಶ್ ತಂಗಿ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದು, ಕೃತಿ ಅವರನ್ನು ವಶಕ್ಕೆ ಪಡೆದು ಡಿಸಿಪಿ ಸಾ.ರಾ ಫಾತೀಮಾ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಓಂ ಪ್ರಕಾಶ್ ಘಟನಾ ಸ್ಥಳದಲ್ಲಿ ಚಾಕು ಇದ್ದುದು ಅದರಿಂದಲೇ ಚುಚ್ಚಿ ಸಾಯಿಸಲಾಗಿದೆ ಎಂಬುದು ಕಂಡುಬಂದಿದೆ. ಆದರೆ, ಪಕ್ಕದಲ್ಲಿದ್ದ ಬಾಟಲಿ ಅಡುಗೆ ಎಣ್ಣೆಯದ್ದು ಎಂಬುದು ಖಚಿತವಾಗುತ್ತಿದೆ. ಆದರೆ, ಎರಡು ಚಾಕು ಸಿಕ್ಕಿರುವ ಬಗ್ಗೆ ಇನ್ನೂ ಸತ್ಯಾಂಶ ತಿಳಿದುಬಂದಿಲ್ಲ. ಸದ್ಯ ಚಾಕುಗಳು ಹಾಗೂ ಬಾಟಲಿ ಮೇಲೆ ಇರೋ ಫಿಂಗರ್ ಫ್ರಿಂಟ್ ಪರಿಶೀಲನೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮತ್ತು ಮಗಳ ಮೇಲೆ ವಿಷಪ್ರಾಶನ ಮಾಡಲಾಗಿದೆ – ಓಂ ಪ್ರಕಾಶ್‌ ವಿರುದ್ಧ ಪತ್ನಿ ಆರೋಪ!

Btv Kannada
Author: Btv Kannada

Read More