ದೇವನಹಳ್ಳಿ : ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತಿದ್ದ ಇಂಡಿಗೊ ವಿಮಾನಕ್ಕೆ ಶನಿವಾರ ರಾತ್ರಿ ಪ್ರಯಾಣಿಕರ ವಾಹನ (ಟೆಂಪೊ ಟ್ರಾವೆಲರ್) ಡಿಕ್ಕಿ ಹೊಡೆದಿದೆ.
ವಿಮಾನ ನಿಲ್ದಾಣದ ರನ್ ವೇಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು (ಗೌಂಡ್ ಸ್ಟಾಫ್) ಪಿಕ್ ಅಪ್ ಮತ್ತು ಡ್ರಾಪ್ ಮಾಡುವ ಖಾಸಗಿ ಕಂಪನಿಯೊಂದಕ್ಕೆ ಸೇರಿದ ವಾಹನವು ವಿಮಾನಕ್ಕೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದೆ.
ಇಂಡಿಗೊ ವಿಮಾನಯಾನ ಸಂಸ್ಥೆಗೆ ಸೇರಿದ ಈ ವಿಮಾನ (0320) ತಾಂತ್ರಿಕ ದೋಷದಿಂದಾಗಿ ಮೂರು ತಿಂಗಳಿಂದ ವಿಮಾನ ನಿಲ್ದಾಣದ ನಿಲುಗಡೆ ಸ್ಥಳದಲ್ಲಿ ನಿಂತಲ್ಲೇ ನಿಂತಿದೆ. ಈ ವಿಮಾನದ ಮುಂಭಾಗದ ಅಡಿಯಲ್ಲಿ ಹಾಯ್ದು ಹೋಗುವಾಗ ವಾಹನದ ಛಾವಣಿ ವಿಮಾನದ ಚೂಪಾದ ಮೂತಿಗೆ ತಾಕಿದೆ. ವಾಹನ ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ಆತನಿಗೆ ಅರಿವಿಗೆ ಬಾರದೆ ಆಕಸ್ಮಿಕವಾಗಿ ಈ ಘಟನೆ ಸಂಭವಿಸಿದೆ. ಈ ವೇಳೆ ವಿಮಾನ ಮತ್ತು ವಾಹನದಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದುಬಂದಿದ್ದು, ಟೆಂಪೊ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
‘ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಅಪಘಾತವಾದ ತಕ್ಷಣ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನಗಳ ಕಾರ್ಯಾಚರಣೆ ಹಾಗೂ ಪ್ರಯಾಣಿಕರ ಸುರಕ್ಷಿತೆಗೆ ಯಾವುದೇ ಧಕ್ಕೆ ಆಗಿಲ್ಲ’ ಎಂದು ಇಂಡಿಗೊ ವಿಮಾನಯಾನ ಸಂಸ್ಥೆಯ ಪ್ರಕಟಣೆ ಹೇಳಿದೆ.
ಇದನ್ನೂ ಓದಿ : ನಿವೃತ್ತ DG-IGP ಓಂ ಪ್ರಕಾಶ್ ಪತ್ನಿಯಿಂದ್ಲೇ ಮರ್ಡರ್ ಆಗಿದ್ದೇಕೆ? ಪೊಲೀಸರ ತನಿಖೆಯಲ್ಲಿ ಭಯಾನಕ ಸತ್ಯ ರಿವೀಲ್!
