ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟಗಳ ಸರಮಾಲೆ ತಪ್ಪುತ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಗಳು ಮುನಿರತ್ನ ಬೆನ್ನುಬಿದ್ದಿದ್ದು ಇದೀಗ ವಿಚಾರಣೆಯ ಬಿಸಿ ತಟ್ಟಲಿದೆ. ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಗಳಡಿ ಕಾರಾಗೃಹಕ್ಕೆ ಹೋಗಿ ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಚಾರ್ಜ್‌ಶೀಟ್ ಆಗಿರುವ ಪ್ರಕರಣವೊಂದರ ಪ್ರಾಸಿಕ್ಯೂಷನ್ಗೆ ಸ್ಪೀಕರ್ ಯು.ಟಿ ಖಾದರ್ ಅನುಮತಿ ನೀಡಿದ್ದಾರೆ.
ಹನಿಟ್ರ್ಯಾಪ್ಗೆ HIV ಸೋಕಿಂತ ಮಹಿಳೆಯನ್ನು ಬಳಸಿಕೊಂಡಿದ್ದು, ಜಾತಿ ನಿಂದನೆ, ಆಮಿಷವೊಡ್ಡಿ ಅತ್ಯಾಚಾರ ನಡೆಸಿದ ಆರೋಪ ಸೇರಿದಂತೆ ಗಂಭೀರ ಆರೋಪಗಳ ಮೇಲೆ ಶಾಸಕ ಮುನಿರತ್ನ ವಿರುದ್ಧ FIR ದಾಖಲಾಗಿತ್ತು. ಈ ಪ್ರಕರಣಗಳ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರಕ್ಕೂ ಹೋಗಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದು ಬಜೆಟ್ ಅಧಿವೇಶನದಲ್ಲೂ ಭಾಗಿಯಾಗಿದ್ದರು.
ಅಧಿವೇಶನ ಕಲಾಪದಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪದ ವೇಳೆ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದೇ ವಿಚಾರ ಸಂಬಂಧ ಬಿಜೆಪಿ ಶಾಸಕರು ಪ್ರತಿಭಟನೆಯನ್ನೂ ನಡೆಸಿದ್ದರು. ಈ ವೇಳೆ ಶಾಸಕ ಮುನಿರತ್ನ ಕೂಡ ಭಾಗಿಯಾಗಿದ್ದರು. ವಿಪಕ್ಷ ನಾಯಕ ಆರ್.ಅಶೋಕ್ ಅವರ ಬಳಿಯೇ HIV ಸೋಕಿಂತರನ್ನು ಕಳಿಸಿ ಅವರಿಗೆ ಸೋಂಕು ತಗುಲಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪವೂ ಶಾಸಕ ಮುನಿರತ್ನ ಮೇಲಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿ ಮತ್ತು BNS 153 ಎ(1)(ಎ)(ಬಿ) ಮತ್ತು 504 ಹಾಗೂ 506 ಕಲಂಗಳ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಸರ್ಕಾರದ ಪೂರ್ವಾನುಮತಿ ಬೇಕಿತ್ತು. ಅದನ್ನು ಈಗ ನೀಡಲಾಗಿದ್ದು ಈ ಕಾರಣದಿಂದ ಶಾಸಕ ಮುನಿರತ್ನ ಅವರ ಮೇಲೆ ಹೂಡಲಾಗಿರುವ ಕೇಸಿನ ವಿಚಾರಣೆ ನ್ಯಾಯಾಲಯದಲ್ಲಿ ಪ್ರಾರಂಭವಾಗಲಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ದ್ವಿಚಕ್ರ ವಾಹನಕ್ಕೆ ಕಂಟೈನರ್ ಡಿಕ್ಕಿ – ಇಬ್ಬರ ದುರ್ಮರಣ!
