ಬೆಂಗಳೂರು : ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ನಿನ್ನೆ ರಾತ್ರಿ ಫೈರಿಂಗ್ ನಡೆದಿದೆ. ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿ ಫೈರಿಂಗ್ ನಡೆದಿದ್ದು, ರಿಕ್ಕಿ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುರಿಯಿಟ್ಟು ಫೈರಿಂಗ್ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಿಕ್ಕಿಯನ್ನು ಸದ್ಯ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ರಿಕ್ಕಿ ಹತ್ಯೆಗೆ 2ನೇ ಪತ್ನಿಯೇ ಸ್ಕೆಚ್ ಹಾಕಿದ್ರಾ ಎನ್ನುವ ಅನುಮಾನ ಮೂಡಿದ್ದು, ನಾಲ್ವರ ವಿರುದ್ಧ FIR ದಾಖಲಾಗಿದೆ. ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಎಸ್ಟೇಟ್ಸ್ ಕಂಪನಿಯವರ ಮೇಲೂ ಪ್ರಕರಣ ದಾಖಲಿಸಲಾಗಿದೆ.

ರಿಕ್ಕಿ ಮೇಲೆ ನಡೆದ ಫೈರಿಂಗ್ಗೆ ಸಂಬಂಧಿಸಿದಂತೆ ಕಾರು ಚಾಲಕ ಬಸವರಾಜು ಅವರು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗುಂಡಿನ ದಾಳಿಯಲ್ಲಿ ನಾಲ್ವರ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಶೆಟ್ಟಿ, ವೈದ್ಯನಾಥನ್ ಮತ್ತು ಸಹಚರರ ಮೇಲೆ BNS 109.3(5), Arms Act 1959ರ ಅಡಿ FIR ದಾಖಲಾಗಿದೆ.

ಆರೋಪಿಗಳ ಪತ್ತೆಗೆ ಸ್ಪೆಷಲ್ ಟೀಂ ರಚನೆ : ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೂಟರ್‌ಗಳ ಬೆನ್ನತ್ತಿದ್ದಾರೆ. ಆರೋಪಿ ಪತ್ತೆಗೆ ಸ್ಪೆಷಲ್ ಟೀಂ ರಚನೆ ಮಾಡಿದ್ದು, ನಾಲ್ಕು ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೀತಿದೆ. ಫೈರಿಂಗ್ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದ್ದು, ರಿಯಲ್ ಎಸ್ಟೇಟ್ ವ್ಯವಹಾರ, ಹಳೇ ದ್ವೇಷ, ತಂದೆ ಮೇಲಿನ ವೈಷಮ್ಯ, ಹಣಕಾಸು ವಿಚಾರಗಳು ಸೇರಿ ಹಲವು ಆಯಾಮಗಳಲ್ಲಿ ತನಿಖೆ ನಡೆಯಲಿದೆ.
ಇದನ್ನೂ ಓದಿ : ಜನಿವಾರ ತೆಗೆಸಿದವರನ್ನು ಒದ್ದು ಒಳಗೆ ಕಳಿಸಿ – ಪ್ರಮೋದ್ ಮುತಾಲಿಕ್ ಕಿಡಿ!
