ಮಂಗಳೂರು : ರಾಜ್ಯದಲ್ಲಿ ವಕ್ಫ್ ಮಸೂದೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಹೈಕೋರ್ಟ್ ಕಂಡೀಶನ್ ಹಾಕಿದೆ. ವಕ್ಫ್ ಕಾಯ್ದೆ ವಿರೋಧಿಸಿ ಏಪ್ರಿಲ್ 18ರ ಶನಿವಾರ ಮಂಗಳೂರಿನಲ್ಲಿ ಹಲವು ಮುಸ್ಲಿಂ ಸಂಘಟನೆಗಳು ಬೃಹತ್ ಪ್ರತಿಭಟನ ಸಭೆ ಆಯೋಜಿಸಿವೆ. ಪ್ರತಿಭಟನೆ ಸಂಬಂಧ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಉದ್ದೇಶಿಸಿವೆ. ಆದರೆ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಬಾರದು ಎಂದು ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.
ಮಂಗಳೂರಿನ ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ಶುಕ್ರವಾರ ಕರ್ನಾಟಕ ಉಲಮಾ ಸಮನ್ವಯ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜನೆಗೊಂಡಿದೆ. ಇನ್ನು ಈ ಪ್ರತಿಭಟನೆಯ ಹಿನ್ನೆಲೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ, ಈ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಕೆಯಾದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ರಸ್ತೆ ಸಂಚಾರವನ್ನು ನಿರ್ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ನ್ಯಾಯಮೂರ್ತಿ ನಾಗ ಪ್ರಸನ್ನ ಅವರ ಏಕಸದಸ್ಯ ಪೀಠವು ಮಂಗಳೂರಿನ ರಾಜೇಶ್ ಅರ್ಕುಳ ಎಂಬವರು ಸಲ್ಲಿಸಿದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿತು. ಪ್ರತಿಭಟನೆ ನಡೆಸಲಿ, ಆದ್ರೆ ರಸ್ತೆ ನಿರ್ಬಂಧ ಮಾಡೋದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಹೆದ್ದಾರಿ ನಿರ್ಬಂಧ ಹೇರುವುದರಿಂದ ಸಾರ್ವಜನಿಕ ಜೀವನಕ್ಕೆ ತೀವ್ರ ಅಡ್ಡಿ ಉಂಟಾಗಲಿದೆ ಎಂದು ಹಿರಿಯ ವಕೀಲರಾದ ಹೇಮಂತ್ ಆರ್ ರಾವ್ ಅವರು ಪೀಠದ ಮುಂದೆ ವಾದಿಸಿದ್ದರು. ಇದನ್ನು ನ್ಯಾಯಪೀಠವು ಪುರಸ್ಕರಿಸಿದೆ. ಹೈಕೋರ್ಟ್ ಆದೇಶವನ್ನು ತುರ್ತಾಗಿ ಮಂಗಳೂರು ಕಮಿಷನರ್ ಅವರ ಗಮನಕ್ಕೆ ನ್ಯಾಯವಾದಿ ಹೇಮಂತ್ ಆರ್ ರಾವ್ ತಂದಿದ್ದಾರೆ.
ಇದನ್ನೂ ಓದಿ : ಕ್ಯಾಬಿನೆಟ್ನಲ್ಲಿ ಒಕ್ಕಲಿಗ, ಲಿಂಗಾಯತ, ಅಹಿಂದ ಸಚಿವರ ನಡುವೆ ವಾಗ್ವಾದ – ಜಾತಿ ಗಣತಿ ಬಗ್ಗೆ ಯಾವುದೇ ನಿರ್ಣಯ ಅಂಗೀಕರಿಸದೆ ಸಭೆ ಮುಕ್ತಾಯ!







